Karnataka
ಬಿಪಿಎಲ್ ಕಾರ್ಡ್ ಪಡೆದ ಶ್ರೀಮಂತರು ವಾಪಸ್ ನೀಡಬೇಕು: ಸಿಎಂ

ಶಿವಮೊಗ್ಗ: ಬಿಪಿಎಲ್ ಕಾರ್ಡ್ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ. 2017ರಲ್ಲಿ ಇದ್ದ ಮಾನದಂಡವೇ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶ್ರೀಮಂತರು ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಪಡೆಯುತ್ತಿರುವುದು ನಿಲ್ಲಬೇಕು. ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರು ವಾಪಸ್ ಕೊಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಪಡೆದವರಿಂದ ಹಣ ವಸೂಲಿ ಮಾಡಬೇಕು. ಬಿಪಿಎಲ್ ಕಾರ್ಡ್ ಅಗತ್ಯ ಇಲ್ಲದವರು ಯಾರು ಪಡೆದಿದ್ದಾರೋ ಅವರೇ ಸ್ವಯಂ ಪ್ರೇರಿತರಾಗಿ ಕಾರ್ಡ್ ವಾಪಸ್ ಕೊಡಬೇಕು. ಇದು ಅವರ ದೃಷ್ಟಿಯಿಂದಲೂ ಒಳ್ಳೆಯದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸೋಗಾನೆ ಬಳಿ ನಿರ್ಮಾಣ ಆಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ನಡೆಸಿದರು. ಒಟ್ಟು 384 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ಸದ್ಯ ರನ್ ವೇ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣ ಆಗಬೇಕು. ನೈಟ್ ಲ್ಯಾಂಡಿಂಗ್ ಗೆ ಸಹ ವ್ಯವಸ್ಥೆ ಕೈಗೊಳ್ಳಲಾಗಿದೆ. ಎರಡನೇ ಹಂತದ ಟೆಂಡರ್ ಕರೆಯಲಾಗುತ್ತಿದ್ದು, ಎರಡು ತಿಂಗಳ ನಂತರ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ. ಒಂದು ವರ್ಷದೊಳಗೆ ಕೇವಲ ಕಾಮಗಾರಿ ಮುಗಿಯುವುದಲ್ಲ, ವಿಮಾನ ಹಾರಾಟ ಆರಂಭವಾಗಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಹಲವು ಸಮುದಾಯಗಳು ಹೋರಾಟ ನಡೆಸುತ್ತಿವೆ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನದ ಇತಿಮಿತಿಯೊಳಗೆ ಯಾರಿಗೂ ತೊಂದರೆ ಆಗದಂತೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಬೆಂಗಳೂರಿಗೆ ಹೋದ ನಂತರ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಸಚಿವ ಸಂಪುಟದ ಸಭೆಯಲ್ಲಿ ಸಹ ಈ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಿ, ಯಾವ ರೀತಿ ಮಾಡಬಹುದು ಎಂಬ ಬಗ್ಗೆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಮಾಧಾನ ತರುವ ರೀತಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ ಎಂದು ಸಿಎಂ ತಿಳಿಸಿದರು.
ಮೂರು ವಿಧಾನ ಸಭೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಇದಕ್ಕೆ ಬೇಕಾದ ಸಿದ್ಧತೆಗಳು ಆಗಿವೆ. ಈಗಾಗಲೇ ರಾಜ್ಯಾಧ್ಯಕ್ಷರು ಉಪ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಯಾರು ನೇತೃತ್ವ ವಹಿಸಲಿದ್ದಾರೆ ಎಂಬುದನ್ನು ಸಹ ಪ್ರಕಟಿಸಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ಉಪ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಶೀಘ್ರವಾಗಿ ಚುನಾವಣಾ ಸಮಿತಿ ಸಹ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ನ್ಯಾಯಮೂರ್ತಿ ರಾಮಾ ಜೋಯಿಸ್ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ವೈ ಸಂತಾಪ ಸೂಚಿಸಿದ್ದು, ರಾಮಾ ಜೋಯಿಸ್ ಅವರು ನ್ಯಾಯಾಧೀಶರಾಗಿ, ರಾಜ್ಯಸಭೆ ಸದಸ್ಯರಾಗಿ, ರಾಜ್ಯಪಾಲರಾಗಿ ಸಲ್ಲಿಸಿರುವ ಸೇವೆ ಅನನ್ಯವಾದುದು. ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಚಿಂತಕರನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದರು.
