Thursday, 22nd August 2019

ಪ್ರವಾಹ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಪ್ರವಾಹ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯಕೈಗೊಳ್ಳಲಾಗಿದೆ.

ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲೇ ವಿಧಾನಸಭೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಯಿತು.

ಕೈಗೊಂಡ ನಿರ್ಧಾರಗಳು: 
ಪ್ರವಾಹ ಸಂತ್ರಸ್ಥರಿಗೆ ಪರಿಹಾರ ನೀಡಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಎನ್.ಡಿ.ಆರ್.ಎಫ್.ನಿಂದ ಲಭಿಸುವ 6,200 ರೂ.ಗಳೊಂದಿಗೆ ರಾಜ್ಯ ಸರ್ಕಾರದ 3,800 ರೂ.ಗಳನ್ನು ಸೇರಿಸಿ ಒಟ್ಟು 10 ಸಾವಿರ ರೂ.ಗಳ ಪರಿಹಾರವಾಗಿ ನೀಡಲಾಗುತ್ತದೆ.

ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ರೈಲು ಮಾರ್ಗವನ್ನು 956 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ. ಶಿವಮೊಗ್ಗ ಕಿರು ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆಯ ಮೂಲಕ 38 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ 66 ಸಂಖ್ಯೆಯ ಸಣ್ಣ ನೀರಾವರಿ/ ಜಿಲ್ಲಾ ಪಂಚಾಯತ್ ಕೆರೆಗಳನ್ನು ಮೂಡಿ ಗ್ರಾಮದ ಹತ್ತಿರ ವರದಾ ನದಿಯಿಂದ ನೀರನ್ನೆತ್ತಿ ತುಂಬಿಸುವ 285 ಕೋಟಿ ರೂ.ಗಳ ಮುಡಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೆ: ಸತಾರೆಂ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರಿಗೆ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಶದಲ್ಲಿರುವ ಕನ್ನಹಳ್ಳಿಯಲ್ಲಿರುವ ಘನತ್ಯಾಜ್ಯ ಘಟಕದಲ್ಲಿನ 20 ಎಕರೆ ಜಾಗವನ್ನು 30 ವರ್ಷಗಳ ಅವಧಿಗೆ `ಉಪಯೋಗಕ್ಕೆ ಮಾತ್ರ’ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಯಿತು.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಾದ ಅನುದಾನ ಬರಬೇಕಿದೆ. ನಿನ್ನೆ ದೆಹಲಿಯಲ್ಲಿ ಕ್ಯಾಬಿನೆಟ್ ಸಭೆ ನಡೆದಿತ್ತು. ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ನೀರಿನ ಹರಿವು ಕಡಿಮೆಯಾದ ನಂತರ ಎಷ್ಟು ನಷ್ಟವಾಗಿದೆ ಅಂತ ಅಂದಾಜು ಮಾಡಲಾಗುತ್ತಿದೆ. ಹೀಗಾಗಿ ಮಳೆ ಪ್ರಮಾಣ ಹಾಗೂ ನದಿಗಳ ಪ್ರವಾಹ ತಗ್ಗಿದ ಮೇಲೆ ಗೃಹ ಇಲಾಖೆಯಿಂದ ರಾಜ್ಯಕ್ಕೆ ಸಮಿತಿ ಬರಲಿದೆ. ಸಮಿತಿ ಅಧ್ಯಯನ ನಡೆಸಿದ ಬಳಿಕ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *