Wednesday, 20th November 2019

ನದಿ ಪಾಲಾಗಿದ್ದ ತಾಯಿ, ಮಗಳನ್ನು ರಕ್ಷಿಸಿ ಹೀರೋ ಆದ 11ರ ಪೋರ

ಗುವಾಹಾಟಿ: ನದಿ ಪಾಲಾಗಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸುವ ಮೂಲಕ ಅಸ್ಸಾಂನ 5ನೇ ತರಗತಿ ಬಾಲಕನೊಬ್ಬ ಹೀರೋ ಆಗಿದ್ದಾನೆ.

ಅಸ್ಸಾಂನ ಆದಿವಾಸಿ ಸಮುದಾಯಕ್ಕೆ ಸೇರಿದ ಉತ್ತಮ್ ತಂತಿ ತಾಯಿ-ಮಗಳನ್ನು ರಕ್ಷಿಸಿದ ಬಾಲಕ. ಉತ್ತಮ್ ಸಾಧನೆ, ಧೈರ್ಯವನ್ನು ಮೆಚ್ಚಿರುವ ರಾಜ್ಯ ಸರ್ಕಾರವು ಬಾಲಕನ ಹೆಸರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದೆ.

ಆಗಿದ್ದೇನು?:
ಬಾಲಕ ಉತ್ತಮ್ ಭಾನುವಾರ ತಮ್ಮ ನಿವಾಸದ ಸಮೀಪದ ನದಿಯ ಕಡೆಗೆ ಬಂದಿದ್ದ. ಈ ವೇಳೆ ಅಂಜಲಿ (35) ತನ್ನ ಇಬ್ಬರು ಪುತ್ರಿಯರಾದ ರಿಯಾ (6) ಮತ್ತು ದಿಪ್ತಿ (18 ತಿಂಗಳು) ಜೊತೆಗೆ ನದಿಗೆ ಬಿದ್ದಿದ್ದರು. ಇದನ್ನು ದೂರದಿಂದ ನೋಡಿದ್ದ ಉತ್ತಮ್ ತಕ್ಷಣವೇ ನದಿಗೆ ಹಾರಿ, ಕೊಚ್ಚಿ ಹೋಗುತ್ತಿದ್ದ ಅಂಜಲಿ ಹಾಗೂ ರಿಯಾ ಅವರನ್ನು ಎರಡನೇ ಪ್ರಯತ್ನದಲ್ಲಿ ರಕ್ಷಿಸಿದ್ದಾನೆ. ಆದರೆ ಕೇವಲ 18 ತಿಂಗಳ ಮುಗ್ದ ಮಗು ದಿಪ್ತಿಯ ರಕ್ಷಣೆ ತಡವಾದರಿಂದ ನೀರುಪಾಲಾಗಿದ್ದಾಳೆ.

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೊನಾವಾಲ್ ಅವರು, ಉತ್ತಮ್ ಧೈರ್ಯ, ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಟ್ವೀಟ್ ಮಾಡಿದ್ದಾರೆ. ಉತ್ತಮ್ ಧೈರ್ಯವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ನದಿಯ ನೀರುಪಾಲಾಗಿದ್ದ ತಾಯಿ-ಮಗಳನ್ನು ರಕ್ಷಿಸಿದ ಆತನ ಸಾಹಸಕ್ಕೆ ಹ್ಯಾಟ್ಸ್ ಆಪ್ ಎಂದು ಹೇಳಿದ್ದಾರೆ.

ಸೊನಿತ್‍ಪುರ್ ಜಿಲ್ಲಾಡಳಿತವು ಉತ್ತಮ್‍ಗೆ ಸನ್ಮಾನ ಮಾಡಿದೆ. ಜೊತೆಗೆ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆತನಿಗೆ ಸೈಕಲ್ ಹಾಗೂ ಹಣಕಾಸಿನ ನೆರವು ನೀಡಿದ್ದಾರೆ. ಈ ವೇಳೆ ಮಾತನಾಡಿದ ಬಾಲಕ ಉತ್ತಮ್, ನಾನು ದೇಶ ಕಾಯುವ ಯೋಧನಾಗಬೇಕು ಎಂದು ಸೈನ್ಯ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ.

ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ, ಮಗಳು ರಕ್ಷಿಸಿರುವ ಬಾಲಕ ಧೈರ್ಯಶಾಲಿ. ಉತ್ತಮ್ ಕುಟುಂಬದವರು ಬಡವರಾಗಿದ್ದು, ಅವರಿಗೆ ಸರ್ಕಾರದಿಂದ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. ಜೊತೆಗೆ ವೈಯಕ್ತಿಕವಾಗಿ ನೆರವು ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ನರ್‍ಸಿಂಗ್ ಪವಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *