Saturday, 22nd February 2020

Recent News

ಉನ್ನಾವ್ ರೇಪ್ ಕೇಸ್ – ಸಂತ್ರಸ್ತೆಗೆ 25 ಲಕ್ಷ ರೂ. ಪರಿಹಾರ, ಸಿಆರ್‌ಪಿಎಫ್ ಭದ್ರತೆ ಕೊಡಿ

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬಕ್ಕೆ ಸಿಆರ್‌ಪಿಎಫ್  ಯೋಧರ ಭದ್ರತೆ, 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಅಪಘಾತದ ಕುರಿತ ತನಿಖೆಯನ್ನು 7 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಯ್‍ಬರೇಲಿಯಲ್ಲಿ ನಡೆದ ಸಂತ್ರಸ್ತೆಯ ಅಪಘಾತ ಪ್ರಕರಣ ಸೇರಿದಂತೆ ಉನ್ನಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದೂ ಪ್ರಕರಣಗಳನ್ನು ದೆಹಲಿಯ ಸಿಬಿಐಗೆ ವರ್ಗಾಯಿಸಬೇಕು. ಇದರೊಂದಿಗೆ ರಾಯ್‍ಬರೇಲಿಯಲ್ಲಿ ನಡೆದ ಅಪಘಾತ ಪ್ರಕರಣದ ತನಿಖೆಯನ್ನು ಬುಧವಾರದಿಂದ ಕೇವಲ 7 ದಿನಗಳ ಒಳಗಡೆ ಪೂರ್ಣಗೊಳಿಸುವಂತೆ ಸಿಬಿಐಗೆ ಸೂಚಿಸಿದೆ.

ಪ್ರತಿ ದಿನ ವಿಚಾರಣೆ ನಡೆಸಿ 45 ದಿನಗಳೊಳಗೆ ಅತ್ಯಾಚಾರ ಪ್ರಕರಣದ ತನಿಖೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿದೆ. 25 ಲಕ್ಷ ರೂ. ಪರಿಹಾರದ ಜೊತೆಗೆ ಸಂತ್ರಸ್ತೆಯ ಕುಟುಂಬ ಬಯಸಿದರೆ, ಅಪಘಾತದಲ್ಲಿ ಬದುಕುಳಿದವರನ್ನು ಲಕ್ನೋ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸಾ ಸೌಲಭ್ಯ ಹೊಂದಿರುವ ದೇಶದ ಯಾವುದೇ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ಸಂತ್ರಸ್ತೆಯ ತಾಯಿ, ಒಡಹುಟ್ಟಿದವರು, ಚಿಕ್ಕಪ್ಪ ಮಹೇಶ್ ಸಿಂಗ್ ಸೇರಿದಂತೆ ಅವರ ಹತ್ತಿರದ ಸಂಬಂಧಿ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ವಕೀಲರಿಗೆ ಸಿಆರ್‌ಪಿಎಫ್  ಯೋಧರ ಭದ್ರತೆ ನೀಡಬೇಕು. ಭದ್ರತೆಯ ಕುರಿತ ಆದೇಶವನ್ನು ಪಾಲಿಸಿರುವ ಕುರಿತು ನಾಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದೆ. ವಿಚಾರಣೆ ತಡವಾಗಿರುವ ಕುರಿತು ಸೂಕ್ತ ಕಾರಣ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರು ವಕೀಲರೊಂದಿಗೆ ರಾಯ್‍ಬರೇಲಿ ಜೈಲಿನಲ್ಲಿರುವ ಸಂಬಂಧಿಕರೊಬ್ಬರನ್ನು ನೋಡಲು ತೆರಳುತ್ತಿದ್ದರು. ಈ ವೇಳೆ ಸಂತ್ರಸ್ತೆಯ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಅಲ್ಲದೆ, ಸಂತ್ರಸ್ತೆ ಹಾಗೂ ವಕೀಲರು ತೀವ್ರ ಗಾಯಗೊಂಡಿದ್ದರು.

ಮಳೆ ಹೆಚ್ಚು ಬರುತ್ತಿದ್ದರಿಂದ ಎರಡೂ ವಾಹನಗಳ ನಿಯಂತ್ರಣ ತಪ್ಪಿ ಅಪಘಾತ ಸಂಭವಿದೆ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪ್ರಸಾದ್ ವರ್ಮಾ ತಿಳಿಸಿದ್ದರು. ಸಂತ್ರಸ್ತೆಯು ಉನ್ನಾವ್‍ನ ನಿವಾಸಿಯಾಗಿದ್ದು, ಬ್ಯಾಂಗರ್ಮೌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಲ್‍ದೀಪ್ ಸೆಂಗರ್ 2017ರಲ್ಲಿ ಮಗಳನ್ನು ಅತ್ಯಾಚಾರ ಗೈದಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಯಾರು ಕೂಡ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ಸಂತ್ರಸ್ತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಅಪಘಾತದ ನಂತರ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳೇ ಈ ಅಪಘಾತ ಮಾಡಿಸಿರಬಹುದು ಎಂದು ದೂರಿದ್ದರು. ಕಳೆದ ಎರಡು ದಿನಗಳಿಂದ ಪ್ರಕರಣ ಭಾರೀ ಸಂಚಲನ ಮೂಡಿಸಿದ್ದು, ಯುಪಿಯಲ್ಲಿ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅಭಿಯಾನ ನಡೆಸಲಾಗುತ್ತಿದೆ. ಇಂದು ಶಾಸಕ ಕುಲ್‍ದೀಪ್ ಸೆಂಗರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *