Sunday, 22nd September 2019

ನಾನು ಹೊನ್ನಾಳಿ ಹುಲಿ, ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲ್ಲ: ರೇಣುಕಾಚಾರ್ಯ

ಚಿತ್ರದುರ್ಗ: ನಾನು ಹೊನ್ನಾಳಿ ಹುಲಿ, ಯಾವುದಕ್ಕೂ ಜಗ್ಗುವುದಿಲ್ಲ. ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ.

ಇಂದು ಚಿತ್ರದುರ್ಗದ ಸಿರಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಬೇಕು ಎಂದರೆ ಸಿಎಂ ಬಿಎಸ್‍ವೈ ಬಳಿ ಪಟ್ಟು ಹಿಡಿಯುತ್ತಿದ್ದೆ. ಯಡಿಯೂರಪ್ಪ ಹಾಗು ವರಿಷ್ಠರ ಬಳಿ ನಾಲ್ಕು ಗೋಡೆ ಮಧ್ಯೆ ಕೇಳುತ್ತೇನೆ. ಬಿಜೆಪಿಗೆ ನಾನು ದ್ರೋಹ ಮಾಡುವುದಿಲ್ಲ. ನನಗೆ ಸದ್ಯ ಮಂತ್ರಿ ಸ್ಥಾನದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸೋತ ಶಾಸಕರು ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಸಾಥ್ ನೀಡಲಿಲ್ಲ. ಈಗ ಕೆಲವರು ಸಚಿವರಾಗಿ ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಅದರ ಅಗತ್ಯ ನಮಗೆ ಇಲ್ಲ. ಎಲ್ಲರೂ ತಿರಸ್ಕರಿಸಿದ ಅಬಕಾರಿ ಖಾತೆ ಪಡೆದು ರಾಜ್ಯ ಸುತ್ತಿದವನು ನಾನು. ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ತಂದುಕೊಟ್ಟಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಈ ವೇಳೆ ಹೈಕಮಾಂಡ್ ಬಳಿ ಯಡಿಯೂರಪ್ಪ ಅಸಾಹಯಕರಾಗಿದ್ದಾರೆಂಬ ಮಾಜಿ ಸಚಿವ ಹೆಚ್. ಆಂಜನೇಯ ಅವರ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಆಂಜನೇಯ ಸಿದ್ದರಾಮಯ್ಯನವರ ಬಾಲವಾಗಿದ್ದವರು. ಆಂಜನೇಯನಿಗೇನು ಗೊತ್ತಿದೆ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದ ಅವರು ಭ್ರಷ್ಟಾಚಾರಿ ಆಂಜನೇಯಗೆ ಬಿ.ಎಸ್.ವೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ರಾಜ್ಯದಲ್ಲಿ ಮತ್ತೋರ್ವ ಯಡಿಯೂರಪ್ಪ ಹುಟ್ಟಲ್ಲ. ನಮಗೆ ಆಂಜನೇಯರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಗುಡುಗಿದರು.

Leave a Reply

Your email address will not be published. Required fields are marked *