Connect with us

Chitradurga

ಕಾಡುಗೊಲ್ಲರಿಗೆ ಎಸ್‍ಟಿ ಮೀಸಲಾತಿ ಆಗ್ರಹಿಸಿ ಉರುಳುಸೇವೆ

Published

on

ಚಿತ್ರದುರ್ಗ: ಕಾಡುಗೊಲ್ಲ ಜನಾಂಗವನ್ನು ಎಸ್‍ಟಿ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದಿಂದ ಸೋಮವಾರ ನಗರದಲ್ಲಿ ಉರುಳು ಸೇವೆ ಮಾಡಿ ಅಪರ ಜಿಲ್ಲಾಧಿಕಾರಿ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿಗೆ ಮನವಿ ಸಲ್ಲಿಸಲಾಯಿತು.

ಬೆಂಕಿಯಂತ ಬಿಸಿಲನ್ನು ಲೆಕ್ಕಿಸದೇ ಚಿತ್ರದುರ್ಗದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉರುಳು ಸೇವೆ ಮೂಲಕ ಆಗಮಿಸಿದ ಕಾಡುಗೊಲ್ಲರು ಬಡುಕಟ್ಟು ಸಂಸ್ಕೃತಿಯುಳ್ಳ ನಮ್ಮನ್ನು ಎಸ್.ಟಿ.ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿದರು. ಅಲ್ಲದೇ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವದ ಗೊಲ್ಲರ ಸಾಂಪ್ರದಾಯಿಕ ಉಡುಪಾದ ಶಳ್ಳಾಣ ಹಾಕಿಕೊಂಡು ಉರಳುಸೇವೆ ಮಾಡಿದರೆ, ಇನ್ನು ಕೆಲವರು ಬಿಳಿ ಬಣ್ಣದ ಪ್ಯಾಂಟು, ಶರ್ಟುಗಳನ್ನು ಹಾಕಿಕೊಂಡು ಸಿಮೆಂಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಿದರು. ಜೊತೆಗೆ ಕೆಲವರು ಪ್ಯಾಂಟ್ ಬನಿಯನ್, ಲುಂಗಿ ಬನಿಯನ್‍ಗಳನ್ನು ತೊಟ್ಟು, ತಲೆಗೆ ಟವಲ್ ಸುತ್ತಿ ಉರುಳು ಸೇವೆ ಮಾಡುತ್ತಿದ್ದರು. ಅವರೊಂದಿಗೆ ನಿಂತು ನೋಡುತ್ತಿದ್ದವರು ಜೈಜುಂಜಪ್ಪ ಎನ್ನುವ ಘೋಷಣೆಗಳನ್ನು ಕೂಗುತ್ತ ಉರುಳು ಸೇವೆಯಲ್ಲಿ ತೊಡಗಿದ್ದವರನ್ನು ಹುರಿದುಂಬಿಸುತ್ತಿದ್ದರು.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾಡುಗೊಲ್ಲರು ಡಿ.ಸಿ.ಕಚೇರಿ ಆವರಣದೊಳಗೆ ಹೋಗಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಡ್ಡವಿಟ್ಟು ತಡೆದರು. ಆಗ ಕೆಲ ಕಾಲ ಪೊಲೀಸರೊಂದಿಗೆ ಮಾತಿನ ವಾಗ್ವಾದ ನಡೆಸಿ ಬ್ಯಾರಿಕೇಡ್‍ಗಳನ್ನು ತಳ್ಳುವಷ್ಟರಲ್ಲಿ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಾಗ ಯಾವುದೇ ಕಾರಣಕ್ಕೂ ನಿಮಗೆ ಮನವಿ ಕೊಡುವುದಿಲ್ಲ. ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವೀಕರಿಸಲಿ ಎಂದು ಪಟ್ಟುಹಿಡಿದಾಗ ಅಪರ ಜಿಲ್ಲಾಧಿಕಾರಿ ಹಿಂದಕ್ಕೆ ತೆರಳಿದರು. ನಂತರ ಸುಡುವ ಬಿಸಿಲಿಗೆ ಹೈರಾಣಾದ ಪ್ರತಿಭಟನಾಕಾರರು ಪುನಃ ಅಪರ ಜಿಲ್ಲಾಧಿಕಾರಿಯವರನ್ನೇ ಕರೆಸಿಕೊಂಡು ಮನವಿ ಸಲ್ಲಿಸಿದರು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಸಿ.ಶಿವು ಯಾದವ್ ಮಾತನಾಡಿ ಆಚಾರ, ವಿಚಾರ, ನಡೆ, ನುಡಿ ಎಲ್ಲವು ಬುಡಕಟ್ಟು ಸಂಸ್ಕೃತಿಯುಳ್ಳವರಾಗಿರುವ ನಾವುಗಳು ಸಮಾಜದ ಮುಖ್ಯ ವಾಹಿನಿಯಿಂದ ತುಂಬಾ ದೂರವಿದ್ದೇವೆ. ರಾಜ್ಯ ಸರ್ಕಾರ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಇನ್ನೂ ಕೇಂದ್ರ ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮೀನಾಮೇಷ ಎಣಿಸುತ್ತಿದೆ. ಇದು ನಮ್ಮ ಆರಂಭಿಕ ಹೋರಾಟ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಮೂಲಕ ವಿಧಾನಸೌದಕ್ಕೆ ಮುತ್ತಿಗೆ ಹಾಕಲಾಗುವುದರ ಜೊತೆಗೆ ಸಿಎಂ ಯಡಿಯೂರಪ್ಪ ಬದಲಾವಣೆಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿ ಆರೇಳು ವರ್ಷಗಳಾಗಿದ್ದರೂ ಕೇಂದ್ರ ನಮ್ಮ ಕಡತವನ್ನು ಇನ್ನು ಕೈಗೆತ್ತಿಕೊಂಡಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸದಿದ್ದರೆ ಸಂಸತ್ ಭವನದ ಮುಂದೆ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ಕೊಟ್ಟ ಮಾತಿಗೆ ತಪ್ಪುವವರಲ್ಲ ಕಾಡುಗೊಲ್ಲರು ಎಂದು ಕೇಂದ್ರಕ್ಕೆ ಬೆದರಿಕೆ ಹಾಕಿದರು.

ಮುಂದಿನ ದಿನಗಳಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಅಗತ್ಯ ಬಿದ್ದರೆ ಸಂಸತ್ ಭವನದ ಮುಂದೆಯೂ ಹೋರಾಡಲು ಸಿದ್ದರಿರಬೇಕೆಂದು ಕಾಡುಗೊಲ್ಲರನ್ನು ಜಾಗೃತಿಗೊಳಿಸಿದರು. ಉರುಳು ಸೇವೆಯಲ್ಲಿ ಸಮುದಾಯದ ಮುಖಂಡರಾದ ಭರಮಸಾಗರದ ರಾಜಪ್ಪ ,ಕೂನಿಕೆರೆ ರಾಮಣ್ಣ, ಸಂಪತ್, ನಾಗಣ್ಣ, ಪ್ರೇಮ, ಹರ್ಷವರ್ಧನ್, ಚಿತ್ತಯ್ಯ, ರಾಜ್‍ಕುಮಾರ್, ಮಹೇಶ್, ವೆಂಕಟೇಶ್‍ಯಾದವ್, ಜಗದೀಶ್, ರಮೇಶ್, ಶಿವಣ್ಣ, ರಾಜಣ್ಣ, ತಿಮ್ಮಯ್ಯ, ನ್ಯಾಯವಾದಿಗಳಾದ ಪಿ.ಆರ್.ವೀರೇಶ್, ಸಿ.ತಿಮ್ಮಣ್ಣ, ಎಸ್.ಪ್ರಕಾಶ್, ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *