Connect with us

Chitradurga

ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

Published

on

– ಕೊನೇ ಕ್ಷಣದಲ್ಲಿ ರಾಮುಲು ವಾಸ್ತವ್ಯ ರದ್ದು

ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಗುರುವಾರ ರಾತ್ರಿ ವಾಸ್ತವ್ಯ ಹೂಡುತ್ತಾರೆ ಎಂದು ಆರೋಗ್ಯ ಇಲಾಖೆ ಬಾರಿ ದುಂದುವೆಚ್ಚ ಮಾಡಿದೆ. ಆದರೆ ಸಚಿವರ ವಾಸ್ತವ್ಯ ದಿಢೀರ್ ರದ್ದಾಗಿದ್ದು, ಕೇವಲ ಒಂದು ರಾತ್ರಿ ವಾಸ್ತವ್ಯಕ್ಕೆ ಇಷ್ಟೊಂದು ದುಂದುವೆಚ್ಚ ಅಗತ್ಯವಿತ್ತಾ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಚಿತ್ರದುರ್ಗ ಜಿಲ್ಲಾಸ್ಪತ್ರೆ ಸುಮಾರು 6,000 ಬೆಡ್‍ಗಳ ವ್ಯವಸ್ಥೆ ಹೊಂದಿದೆ. ಆದರೆ ವೈದ್ಯರು, ಸಿಬ್ಬಂದಿ ಕೊರತೆ ಜೊತೆಗೆ ಮೂಲಭೂತ ಸೌಲಭ್ಯಗಳು ಇಲ್ಲಿಲ್ಲ. ಹೀಗಾಗಿ, ಆರೋಗ್ಯ ಸಚಿವ ಶ್ರೀರಾಮುಲು ನಿನ್ನೆ ರಾತ್ರಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದರು. ಇದಕ್ಕಾಗಿ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿತ್ತು. ಸಾಮಾನ್ಯ ದಿನಗಳಲ್ಲಿ ಗಬ್ಬು ನಾರುತ್ತಿದ್ದ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ, ಹೈಟೆಕ್ ಟಚ್ ನೀಡಲಾಗಿತ್ತು.

ಈವರೆಗೆ ಬಾಗಿಲು ತೆರೆಯದ ವಿಐಪಿ ವಾರ್ಡ್ ಗುರುವಾರ ದಿಢೀರ್ ಓಪನ್ ಆಗಿತ್ತು. ತುರ್ತು ಚಿಕಿತ್ಸಾ ವಾರ್ಡ್ ಹಾಗೂ ಜನರಲ್ ವಾರ್ಡ್ ನಲ್ಲಿ ವಾಸ್ತವ್ಯಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹೊಸ ಎಸಿ, ಟಿವಿ, ಫ್ಯಾನ್ ಹಾಗೂ ಬೆಡ್, ಕಾಟ್‍ಗಳನ್ನು ತರಿಸಿ ಭರ್ಜರಿಯಾಗಿ ಸಿದ್ಧಗೊಳಿಸಲಾಗಿತ್ತು. ಆದರೆ ಆರೋಗ್ಯ ಸಚಿವರು ಅನ್ಯ ಕಾರ್ಯನಿಮಿತ್ತ ವಾಸ್ತವ್ಯವನ್ನು ದಿಢೀರ್ ರದ್ದುಗೊಳಿಸಿದ್ದಾರೆ.

ಕೇವಲ ಒಂದು ರಾತ್ರಿ ಬಂದು ಹೋಗುವ ಸಚಿವರ ಸ್ವಾಗತಕ್ಕಾಗಿ ಇಷ್ಟೆಲ್ಲ ಆಡಂಬರದ ಸಿದ್ಧತೆ ಮಾಡಬೇಕಿತ್ತಾ? ಅದರ ಬದಲಿಗೆ ನಿತ್ಯವೂ ಇದೇ ರೀತಿ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಟ್ಟಿದ್ದರೆ ಆಗುತ್ತಿರಲಿಲ್ಲವೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಈ ಆಕ್ರೋಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರೋ ಸಚಿವ ಶ್ರೀರಾಮುಲು ಇವತ್ತು ಚಿತ್ರದುರ್ಗದ ಜಿಲ್ಲಾಪಂಚಾಯತ್‍ನಲ್ಲಿ ನಡೆಯಲಿರುವ ಕೆಡಿಪಿ ಸಭೆಗೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ.