Connect with us

Cinema

ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟ ಮೆಗಾಸ್ಟಾರ್- ಯುಗಾದಿ ಸಿಹಿಗೆ ಅಭಿಮಾನಿಗಳು ಫಿದಾ

Published

on

ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅಭಿಮಾನಿಗಳಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಚಿರಂಜೀವಿ ಅವರು ಈ ಪ್ರಯತ್ನಕ್ಕೆ ಮುಂದಾಗಿದ್ದು, ಅಭಿಮಾನಿಗಳು ಇದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸಮಯದಲ್ಲಿ ಮೆಗಾ ಸ್ಟಾರ್ ಇಂತಹ ನಿರ್ಧಾರ ಯಾಕೆ ಕೈಗೊಂಡರು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟಿದ್ದರಿಂದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರು ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್ ಗಳಲ್ಲಿ ಖಾತೆ ತೆರೆದಿದ್ದು, ಈ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಹತ್ತಿರವಾಗಲು ಪ್ರಯತ್ನ ನಡೆಸಿದ್ದಾರೆ. ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರೂ ಚಿರಂಜೀವಿ ಅವರು ಈ ವರೆಗೆ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು.

ಇದೀಗ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಸಿನಿಮಾಗಳ ಕುರಿತು ಮಾಹಿತಿ ಹಂಚಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರಂತೆ. ಈ ನಿರ್ಧಾರ ಅಭಿಮಾನಿಗಳಿಗೆ ಖುಷಿ ತಂದಿದ್ದು, ಲಕ್ಷಾಂತರ ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ.

ಯುಗಾದಿ ಹಬ್ಬದ ದಿನದಂದು ಇದೀಗ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಈ ವಿಷಯವನ್ನು ಕೋನಿಡೇಲ ಪ್ರೊಡಕ್ಷನ್ಸ್ ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಬಹಿರಂಗಪಡಿಸಲಾಗಿದೆ. ಇನ್‍ಸ್ಟಾಗ್ರಾಮ್ ನಲ್ಲಿ ಚಿರಂಜೀವಿಕೋನಿಡೇಲ ಹೆಸರಿನಲ್ಲಿ ಖಾತೆ ತೆರೆದಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರಾಗಿದ್ದಾರೆ. ಚಿರಂಜೀವಿ ಅವರು ಇದುವರೆಗೆ ಕೇವಲ ಒಂದು ಫೋಟೋವನ್ನು ಮಾತ್ರ ಹಂಚಿಕೊಂಡಿದ್ದಾರೆ.

ಇನ್ನು ಟ್ವಟ್ಟರ್ ನಲ್ಲಿಯೂ ಆಕ್ಟಿವ್ ಆಗಿರುವ ಚಿರಂಜೀವಿ ಅವರಿಗೆ ಒಂದೇ ದಿನಕ್ಕೆ 86 ಸಾವಿರಕ್ಕೂ ಅಧಿಕ ಫಾಲೋವರ್ಸ್ ಆಗಿದ್ದಾರೆ. ಅಲ್ಲದೆ ಚಿರು ಕೊರೊನಾ ಕುರಿತು ಮೊದಲ ಟ್ವೀಟ್ ಮಾಡಿದ್ದಾರೆ. ದೇಶದಿಂದ ಕೊರೊನಾ ಮಹಾಮಾರಿ ತೊಲಗಿಸಲು ಎಲ್ಲರೂ ಕೈ ಜೋಡಿಸಬೇಕಿದೆ. ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಕೇಳಿಕೊಂಡಿದ್ದಾರೆ. ಇದರೊಂದಿಗೆ ಯುಗಾದಿ ಹಬ್ಬದ ಶುಭ ಕೋರಿರುವ ಚಿರು ಎಲ್ಲರೂ ಮನೆಗಳಲ್ಲೇ ಇದ್ದು, ಈ ಸೋಂಕು ಹರಡದಂತೆ ಎಚ್ಚರವಹಿಸೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು ಎರಡನೇ ಟ್ವೀಟ್‍ನಲ್ಲಿ ಆರ್‍ಆರ್‍ಆರ್ ಸಿನಿಮಾದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಸದ್ಯ ಚಿರು ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕೊರೊನಾ ಭೀತಿಯಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಇದೇ ಸಮಯದಲ್ಲಿ ಚಿರಂಜೀವಿ ಅವರು ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟಿದ್ದಾರೆ.