ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

ಲಕ್ನೋ: ಆತ್ಯಾಚಾರ ಪ್ರಕರಣದಲ್ಲಿ ಇಂದು ಬೆಳಗ್ಗೆ ಅರೆಸ್ಟ್ ಆಗಿದ್ದ, ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರು ನಾನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಇಂದು ಬೆಳಗ್ಗೆ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಚಿನ್ಮಯಾನಂದ ನಾನು ಕಾನೂನು ವಿದ್ಯಾರ್ಥಿನಿಗೆ ಮಸಾಜ್ ಮಾಡಲು ಬಾ ಎಂದು ಕರೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಕೃತ್ಯ ಎಸಗಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಚಿನ್ಮಯಾನಂದ ಹೇಳಿದ್ದಾರೆ ಎಂದು ತನಿಖಾ ತಂಡ ಹೇಳಿದೆ.

ಈ ವಿಚಾರದ ಬಗ್ಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ನವೀನ್ ಅರೋರಾ, ಸ್ವಾಮಿ ಚಿನ್ಮಯಾನಂದ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಸಂಭಾಷಣೆ ಮತ್ತು ಬಾಡಿ ಮಸಾಜ್ ಸೇರಿದಂತೆ ಬಹುತೇಕ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಸಹ ಪರಿಶೀಲನೆ ಮಾಡಲಾಗುತ್ತಿದೆ. ತಾನು ಮಾಡಿರುವ ಕೆಲಸದ ಬಗ್ಗೆ ತಾನೇ ಬೇಸರ ವ್ಯಕ್ತಪಡಿಸಿರುವ ಚಿನ್ಮಯಾನಂದ ಅವರು, ಈ ವಿಚಾರದ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನನ್ನ ಮೇಲೆ ಬಿಜೆಪಿ ನಾಯಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಮಸಾಜ್ ಮಾಡಲು ಬಾ ಎಂದು ಕರೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿದ್ದಳು ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ನಂತರ ಈ ವಿಚಾರಕ್ಕೆ ಸಂಬಂಧಪಟ್ಟ ವಿಡಿಯೋವನ್ನು ವಿದ್ಯಾರ್ಥಿನಿ ಕುಟುಂಬದವರು ತನಿಖಾ ತಂಡಕ್ಕೆ ನೀಡಿದ್ದರು.

ವಿದ್ಯಾರ್ಥಿನಿ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಈ ವಿಡಿಯೋ ಮೂಲಕ ತನ್ನ ಕಕ್ಷಿದಾರನನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಮತ್ತು ಓಂ ಸಿಂಗ್ ತನ್ನ ಬಳಿ ಹುಡುಗಿ ಮತ್ತು ಅವರ ಸ್ನೇಹಿತರ ವಿಡಿಯೋ ಇದ್ದು, ಅದು ಚಿನ್ಮಯಾನಂದ್ ಅವರ ಮೇಲೆ ಸುಳ್ಳು ಆರೋಪ ಮಾಡಲು ಸಂಚು ರೂಪಿಸಿರುವುದನ್ನು ತೋರುತ್ತದೆ ಎಂದು ಹೇಳಿದ್ದರು.

ಈ ಹಿಂದೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು, ಚಿನ್ಮಯಾನಂದ ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯಾನಂದ ಅವರ ಪರವಾಗಿ ಬೆದರಿಕೆ ಹಾಕಿದ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *