Connect with us

Districts

ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು

Published

on

Share this

ಹಾವೇರಿ: ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಪುರುಷನಿಗೆ 21 ಮತ್ತು ಮಹಿಳೆಗೆ ಮದುವೆಯಾಗಲು ಹಿಂದೂ ವಿವಾಹ ಕಾಯ್ದೆ ಪ್ರಕಾರ 18 ವರ್ಷ ವಯಸ್ಸಾಗಿರಬೇಕು. ಅದರೆ ಜಿಲ್ಲೆಯ ಸವಣೂರು ತಾಲೂಕಿನ ತೆಗ್ಗಿಹಳ್ಳಿಯ ಗ್ರಾಮದಲ್ಲಿ ಹದಿನಾರು ವರ್ಷದ ಬಾಲಕಿಗೆ ಮದುವೆ ಮಾಡಲು ಬಾಲಕಿಯ ಪೋಷಕರು ಸಿದ್ಧತೆ ನಡೆಸಿದ್ದರು. ಇದನ್ನು ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ.

ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಮಂಜುನಾಥ ಭಜಂತ್ರಿ ಎಂಬ ಯುವಕನಿಗೆ ಆತನ ಮನೆಯವರು ಹಾವೇರಿ ನಗರದ 16 ವರ್ಷದ ಬಾಲಕಿಯೊಂದಿಗೆ ಮದುವೆ ಫಿಕ್ಸ್ ಮಾಡಿದ್ದರು. ಮಂಜುನಾಥನ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಇಂದು ತೆಗ್ಗಿಹಳ್ಳಿ ಗ್ರಾಮದಲ್ಲಿ ಮದುವೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. 16 ವರ್ಷದ ಬಾಲಕಿಗೆ ಮದುವೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಶಿಶು ಅಭಿವೃದ್ಧಿ ಅಧಿಕಾರಿಗಳು ಮಂಜುನಾಥನ ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಯಾವುದೇ ಕಾರಣಕ್ಕೂ ಹದಿನಾರು ವರ್ಷದ ಬಾಲಕಿಗೆ ಮದುವೆ ಮಾಡಲು ಬಿಡುವುದಿಲ್ಲ ಎಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಕಾನೂನು ಮೀರಿ ಮದುವೆ ಮಾಡಿಕೊಂಡರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮಂಜುನಾಥ್ ಮನೆಯವರಿಗೆ ಎಚ್ಚರಿಕೆ ನೀಡಿ ಅಧಿಕಾರಿಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಹಾವೇರಿ ನಿರ್ದೇಶಕನಿಗೆ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಪ್ರಶಸ್ತಿ

ಮದುವೆ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಗಳಿಗಾಗಿ ಬಾಲಕಿಯನ್ನು ಅದಾಗಲೇ ಯುವಕನ ಮನೆಗೆ ಕರೆದುಕೊಂಡು ಬರಲಾಗಿತ್ತು. ಇನ್ನೇನು ಒಂದು ದಿನ ಕಳೆದಿದ್ದರೆ ಬಾಲಕಿಗೆ ಆಕೆಯ ಮನೆಯವರು ಮದುವೆ ಮಾಡುತ್ತಿದ್ದರು. ಬಾಲಕಿಗೆ ಮದುವೆ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ವರ ಮಂಜುನಾಥನ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬಾಲ್ಯ ವಿವಾಹ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಲಕಿಗೆ ಮದುವೆ ಮಾಡುವುದಿಲ್ಲವೆಂದು ಬಾಲಕಿ ಮನೆಯವರಿಂದ ಅಧಿಕಾರಿಗಳು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ನಂತರ ಬಾಲಕಿಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿದೆ.

ಯಾರೂ ಕೂಡ 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು. ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಯಾರಾದರೂ ಬಾಲ್ಯ ವಿವಾಹ ಮಾಡುತ್ತಿರುವುದು ಕಂಡುಬಂದರೆ ಇಲಾಖೆ ಗಮನಕ್ಕೆ ತರುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement