Connect with us

Chikkamagaluru

ಕಾಲುಗಳ ಸ್ವಾಧೀನ ಕಳೆದುಕೊಂಡ ಪ್ರಿಯತಮೆಗೆ ಬಾಳುಕೊಟ್ಟ ಪ್ರೇಮಿ

Published

on

– ಯುವತಿಯೇ ಬೇಡ ಎಂದರೂ ಆಕೆಯನ್ನೇ ಮದುವೆಯಾದ
– ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದ

ಚಿಕ್ಕಮಗಳೂರು: ಪ್ರಿಯತಮೆಯೇ ಬೇಡ ಬೇರೆ ಮದುವೆಯಾಗು ಎಂದರೂ ಕೇಳದೆ ಆರು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನೇ ತಾಲೂಕಿನ ಭಕ್ತರಹಳ್ಳಿಯ ಯುವಕ ಮದುವೆಯಾಗಿ ಪ್ರೀತಿ ಎಂಬ ಪದಕ್ಕೆ ಹೊಸ ಅರ್ಥ ಕಲ್ಪಿಸಿದ್ದಾನೆ.

ಭಕ್ತರಹಳ್ಳಿಯ ಮನು-ಸ್ವಪ್ನಾ ಕಳೆದ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಚಿಕ್ಕಂದಿನಿಂದಲೂ ಚೆನ್ನಾಗಿದ್ದ ಸ್ವಪ್ನಾಗೆ ಕಳೆದ ಎರಡು ವರ್ಷಗಳಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ವೀಲ್‍ಚೇರ್ ಇಲ್ಲದಿದ್ದರೆ ಆಕೆಗೆ ಬದುಕೇ ಇಲ್ಲ ಎಂಬಂತಹಾ ಸ್ಥಿತಿ ತಲುಪಿದ್ದಳು. ಆದರೆ ಪ್ರೀತಿಸಿದವಳ ಕೈಬಿಡಬಾರದು ಎಂದು ಆಕೆಯೇ ಬೇಡ ಎಂದರೂ ಅವಳನ್ನ ಮದುವೆಯಾಗಿ ಪ್ರೀತಿಸಿದವಳ ಕಣ್ಣಲ್ಲಿ ಹೀರೋ ಆಗಿ, ನೋಡುಗರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

ಪ್ರೀತಿ ಎಂಬ ಪದ ಎರಡೇ ಅಕ್ಷರದ್ದಾದರೂ ಅದಕ್ಕೆ ಸಾವಿರಾರು ಮುಖಗಳಿವೆ. ಸೋಲು-ಗೆಲುವಿನ ಪ್ರೀತಿಗೆ ಲೆಕ್ಕವಿಲ್ಲ. ಒಬ್ಬೊಬ್ಬರು ಒಂದೊಂದಕ್ಕಾಗಿ ಲವ್ ಮಾಡುವವರೇ ಹೆಚ್ಚು. ಆದರೆ ಮನು ಚೆನ್ನಾಗಿದ್ದಾಗ ಲವ್ ಮಾಡಿ ಈಗ ಅವಳಿಗೆ ಏನೋ ಆಯ್ತು ಎಂದು ಕೈಬಿಟ್ಟರೇ ಅದು ಪ್ರೀತಿ ಎಂದು ಕರೆಸಿಕೊಳ್ಳಲ್ಲ ಎಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಕೆಯನ್ನೇ ಮದುವೆಯಾಗಿದ್ದಾರೆ.

ಬಡಕುಟುಂಬದ ಇಬ್ಬರೂ ಪಿಯುಸಿ ಓದಿದ್ದಾರೆ. ಹಾರ್ಡ್‍ವೇರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಮನು ಪ್ರೇಯಸಿಗೆ ಹೀಗಾಯ್ತು ಎಂದು ಕೆಲಸ ಬಿಟ್ಟು ಹಳ್ಳಿಯಲ್ಲೇ ಕೆಲಸ ಮಾಡಿಕೊಂಡು ಆಕೆಯನ್ನ ಹುಷಾರು ಮಾಡಲು ಆಸ್ಪತ್ರೆ, ನಾಟಿ ಔಷಧಿ ಅಂತೆಲ್ಲಾ ತಿರುಗಾಡಿದ್ದಾರೆ. ಆದರೆ ಎಲ್ಲೂ ಪ್ರೇಯಸಿಯ ಕಾಲುಗಳು ಸರಿಯಾಗಿಲ್ಲ. ಶಿವಮೊಗ್ಗ, ಮೈಸೂರು, ಮಂಗಳೂರು, ಬೆಂಗಳೂರು, ಕೇರಳದಲ್ಲೂ ವೈದ್ಯರು ನಾರ್ಮಲ್ ಇದೆ ಎಂದು ಹೇಳಿದ್ದಾರೆ. ಆದರೆ, ಸ್ವಪ್ನಾಳಿಗೆ ಎದ್ದು ನಿಲ್ಲಲು, ಓಡಾಡಲು ಆಗುತ್ತಿಲ್ಲ. ಎಲ್ಲಾ ಕಡೆ ತೋರಿಸಿ ಕೈಚೆಲ್ಲಿ ಮನೆಗೆ ಕರೆದುಕೊಂಡು ಬಂದಿದ್ದರು.

ಸ್ವಪ್ನಾ ಕೂಡ ನಾನು ಹೀಗಿದ್ದೇನೆ. ಬೇಡ ಎಲ್ಲರಿಗೂ ತೊಂದರೆ ಬೇರೆ ಮದುವೆಯಾಗು ಎಂದಿದ್ದಳು. ಆದರೆ, ಒಪ್ಪದ ಯುವಕ ನಾನು ನಿನ್ನನ್ನ ಕೈಬಿಡಲ್ಲ. ಕೊನೆಯವರೆಗೂ ನಿನ್ನ ಜೊತೆ ಇರುತ್ತೇನೆ ಎಂದು ಆಕೆ ಜೊತೆಯೇ ಸಪ್ತಪದಿ ತುಳಿದು ಪ್ರೀತಿಗೆ ಮಾದರಿಯಾಗಿದ್ದಾರೆ.

ಕಾಲುಗಳ ಸ್ಥಿತಿ ಕಂಡು ಮಾನಸಿಕವಾಗಿಯೂ ಬಳಲಿದ್ದ ಪ್ರೇಮಿಗೆ ಧೈರ್ಯ ತುಂಬಿ ನಿನಗೆ ನಾನಿದ್ದೇನೆ ಜೀವನ ಪೂರ್ತಿ ನಿನ್ನನ್ನ ಹೊತ್ತೇ ತಿರುಗುತ್ತೇನೆಂದು ಪ್ರೀತಿಸಿದವಳಿಗೆ ಊರುಗೋಲಾಗಿದ್ದಾರೆ. ಮನು ತಾಯಿ ಕೂಡ ನನ್ನ ಮಗ ಇಷ್ಟ ಪಟ್ಟಿದ್ದಾನೆ. ಅಷ್ಟೇ ಮುಗೀತು. ಅವಳೇ ನನಗೆ ಮಗಳು-ಸೊಸೆ ಎಲ್ಲಾ ಎಂದು ಮನೆ ತುಂಬಿಸಿಕೊಂಡು, ನನ್ನ ಮಗಳಂತೆ ನೋಡಿಕೊಳ್ತೇನೆ ಎಂದಿದ್ದಾರೆ. ಊರಿನ ಜನ ಕೂಡ ಪ್ರೇಮಿಗಳ ಬೆನ್ನಿಗೆ ನಿಂತಿದ್ದಾರೆ. ಸ್ವಪ್ನಾಳನ್ನು ಹುಷಾರು ಮಾಡುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.

ಇಬ್ಬರದ್ದು ಬೇರೆ-ಬೇರೆ ಜಾತಿ. ಆದರೆ, ಇಲ್ಲಿ ಜಾತಿ-ಅಂತಸ್ತಿನ ವಿಷಯವೇ ಬಂದಿಲ್ಲ. ಆಸ್ತಿ-ಅಂತಸ್ತಿಗೆ ಈ ಹಳ್ಳಿ ಪ್ರೀತಿಯಲ್ಲಿ ಬೆಲೆಯೂ ಸಿಕ್ಕಿಲ್ಲ. ಪ್ರಾಮಾಣಿಕ ಹಾಗೂ ನಿಷ್ಕಲ್ಮಷ ಪ್ರೀತಿ ಇಲ್ಲಿ ಜಾತಿ-ಅಂತಸ್ತಿನ ಸಮಾಧಿ ಮೇಲೆ ಹಸೆಮಣೆ ಏರಿದೆ.

ಲವ್ ಮಾಡಿದವರೆಲ್ಲಾ ಮದುವೆ ಆಗಲ್ಲ. ಮದುವೆಯಾದ ಮೇಲೆ ಮುರಿದ ಬಿದ್ದ ನೂರಾರು ಉದಾಹರಣೆಗಳಿವೆ. ಆಸೆ-ಶೋಕಿ-ಹಣ ಹೀಗೆ ಹತ್ತಾರು ಕಾರಣಗಳಿಂದ ಲವ್ ಮಾಡುವವರ ಮಧ್ಯೆ ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿ ಮಾಡಿ ಅವಳು ಹೇಗಿದ್ದರೂ ನನ್ನವಳೆಂದು ಕಾಲುಗಳ ಸ್ವಾಧೀನವೇ ಇಲ್ಲದಿದ್ದರೂ ಜೀವನ ಪರ್ಯಂತ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಪ್ರೀತಿಸಿದವಳನ್ನೇ ವರಿಸಿದ ಮನುವಿಗೆ ಜನ ಕೂಡ ಭೇಷ್ ಅಂದಿದ್ದಾರೆ. ಅವರು ಬದುಕು ಹಸನಾಗಲಿ ಎಂದು ಹರಸಿದ್ದಾರೆ.

Click to comment

Leave a Reply

Your email address will not be published. Required fields are marked *