Connect with us

Chikkamagaluru

ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣು – ಅರ್ಧಗಂಟೆಯಲ್ಲೇ ಹೋಯ್ತು 2 ಜೀವ

Published

on

ಚಿಕ್ಕಮಗಳೂರು: ಕೊಲೆಗೈದ ಬಳಿಕ ಭಯಗೊಂಡು ತಾನೂ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಲ್ಲಂದೂರು ಸಮೀಪದ ಗಂಧರ್ವಗಿರಿ ಗ್ರಾಮದಲ್ಲಿ ನಡೆದಿದೆ.

ಗಂಧರ್ವಗಿರಿ ಗ್ರಾಮದ ಕಾಫಿ ತೋಟದಲ್ಲಿ ಕೃಷ್ಣಪ್ಪ ಹಾಗೂ ಬಸಪ್ಪ ಕೂಲಿ ಕೆಲಸ ಮಾಡಿಕೊಂಡು ತೋಟದ ಲೈನ್ ಮನೆಗಳಲ್ಲಿ ವಾಸವಿದ್ದರು. ಇಬ್ಬರೂ ಕೂಡ ಮೂಲತಃ ಮಂಗಳೂರಿನವರಾಗಿದ್ದು, ಬಹಳ ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಆದರೆ ಇಬ್ಬರ ಮಧ್ಯೆ ಆಗಾಗ್ಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುತ್ತಿತ್ತು. ಗ್ರಾಮದ ಜನ ಸಮಾಧಾನ ಮಾಡುತ್ತಿದ್ದರು. ಎರಡು ದಿನದ ಬಳಿಕ ಇಬ್ಬರೂ ಸರಿಯಾಗುತ್ತಿದ್ದರು.

ಆದರೆ ಇಂದು ಬೆಳಗ್ಗೆ ನೀರು ತರಲು ಹೋದ ಕೃಷ್ಣಪ್ಪ ಹಾಗೂ ಕೆಲಸಕ್ಕೆ ಹೊರಟಿದ್ದ ಬಸಪ್ಪನ ಮಧ್ಯೆ ಗಲಾಟೆ ನಡೆದಿದೆ. ಆದರೆ ಇಬ್ಬರ ಮಧ್ಯೆ ನೀರಿನ ಬಾವಿ ಬಳಿ ಏನು ನಡೆಯಿತೆಂದು ಯಾರಿಗೂ ಗೊತ್ತಿಲ್ಲ. ಕೆಲಸಕ್ಕೆ ಹೊರಟಿದ್ದ ಬಸಪ್ಪ ಕೈಯಲ್ಲಿದ್ದ ಮಚ್ಚಿನಿಂದ ಕೃಷ್ಣಪ್ಪನ ಕುತ್ತಿಗೆಗೆ ಹೊಡೆದಿದ್ದಾನೆ. ತೀವ್ರವಾದ ರಕ್ತ ಸ್ರಾವದಿಂದ 45 ವರ್ಷದ ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆ ಮಾಡಿದೆ ಎಂದು ಭಯಗೊಂಡ ಬಸಪ್ಪ ಕೆಲಸಕ್ಕೂ ಹೋಗದೆ ಮನೆಗೆ ಬಂದು ಕಳೆನಾಶಕ ಕುಡಿದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಅರ್ಧ ಗಂಟೆಯೊಳಗೆ ಎರಡು ಜೀವಗಳು ಹೋಗಿವೆ. ಸ್ಥಳಕ್ಕೆ ಆಗಮಿಸಿದ ಮಲ್ಲಂದೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *