Connect with us

Chikkamagaluru

ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

Published

on

Share this

ಚಿಕ್ಕಮಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ರೈಲಿಗೆ ತಲೆಕೊಡುವ ಮೂಲಕ ಆತ್ಮಹತ್ಮೆಗೆ ಶರಣಾಗಿದ್ದು, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರ ನಿಧನಕ್ಕೆ ಇದೀಗ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ.

ಹುಟ್ಟು ಹಾಗೂ ರಾಜಕೀಯ ಹಿನ್ನೆಲೆ
ಎಸ್ ಎಲ್ ಧರ್ಮೆಗೌಡ ಅವರು ಮಾಜಿ ಶಾಸಕ ಲಕ್ಷ್ಮಯ್ಯ ಅವರ ಪುತ್ರ. ಧರ್ಮೆಗೌಡ ಅವರ ತಂದೆ ಲಕ್ಷ್ಮಯ್ಯ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದರು. ಲಕ್ಷ್ಮಯ್ಯ 1983, 1985 ಹಾಗೂ 1994 ಹೀಗೆ ಒಟ್ಟು 3 ಬಾರಿ ಬೀರೂರಿನಿಂದ ಶಾಸಕರಾಗಿದ್ದರು.

ವೈಯಕ್ತಿಕ ಜೀವನ:
ಧರ್ಮೇಗೌಡ ಅವರಿಗೆ 65 ವರ್ಷವಾಗಿತ್ತು. ಇವರು ಪತ್ನಿ ಹೆಸರು ಮಮತಾ. ಈ ದಂಪತಿಗೆ ಮಗ ಸೋನಾಲ್, ಮಗಳು ಸಲೋನಿ ಇದ್ದಾರೆ. ರಾಜಕೀಯ ಮಾತ್ರವಲ್ಲದೇ ಧರ್ಮೇಗೌಡ ಇತ್ತೀಚೆಗೆ ಕೃಷಿ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದರು. ಕೃಷಿಯ ಕುರಿತಾಗಿ ಹೆಚ್ಚಿನ ಗಮನ ಮತ್ತು ಆಸಕ್ತಿಯನ್ನು ತೋರಿಸುತ್ತಿದ್ದರು.

ರಾಜಕೀಯ ಬದುಕು:
ಧರ್ಮೇಗೌಡ ಅವರು ಬಿಳಕಲ್ ಹಳ್ಳಿ ಗ್ರಾಮಪಂಚಾಯತ್ ಸದಸ್ಯರಾಗಿ ರಾಜಕೀಯ ಬದುಕನ್ನು ಆರಂಭಿಸಿದ್ದರು. ನಂತರ ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿಯೂ ಧರ್ಮೇಗೌಡ ಅವರು ಸೇವೆ ಸಲ್ಲಿಸಿದ್ದಾರೆ. ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿದ್ದರು. ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾಗಿದ್ದರು.

ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕ, ದೆಹಲಿಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೋಟಾಸ್ ಲಿಮಿಟೆಡ್ ನಿರ್ದೇಶಕ, ತಾಲೂಕು ಪಂಚಾಯತ್ ಸದಸ್ಯ, ಜಿಲ್ಲಾಪಂಚಾಯತ್ 2 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೀರೂರು ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದರು ಹಾಗೂ ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ದೇವೆಗೌಡ ಅವರ ಕುಟುಂಬದ ಒಡನಾಟ:
ಧರ್ಮೇಗೌಡ ಅವರು ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಆಪ್ತ ಸ್ನೇಹಿತರಾಗಿದ್ದರು. ಅದೇ ಕಾರಣಕ್ಕೆ ಅವರನ್ನ ವಿಧಾನಪರಿಷತ್ ಸದಸ್ಯರನ್ನಾಗಿ ಕುಮಾರಸ್ವಾಮಿ ಆಯ್ಕೆ ಮಾಡಿದ್ದರು. ಕುಮಾರಸ್ವಾಮಿ ಜೊತೆಗಿನ ಸ್ನೇಹವೇ ಧರ್ಮೆಗೌಡ ಅವರಿಗೆ ಉಪ ಸಭಾಪತಿ ಸ್ಥಾನವು ಒಲಿಯುವಂತೆ ಮಾಡಿತ್ತು.

ಮೈತ್ರಿ ಸರ್ಕಾರದಲ್ಲಿ ಒಲಿದಿದ್ದ ಉಪಸಭಾಪತಿ ಸ್ಥಾನ:
ಮೊದಲು ಸಭಾಪತಿಗೆ ದೇವೇಗೌಡರು ಮತ್ತು ಸಿದ್ದರಾಮಯ್ಯ ಪಟ್ಟು ಹಿಡಿಯುತ್ತಾರೆ. ಇಬ್ಬರ ಹಠ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿತ್ತದೆ. ಸಭಾಪತಿ ಸ್ಥಾನಕ್ಕೆ ಇಬ್ಬರು ನಾಯಕರು ಸೂಚಿಸಿದ ಹೆಸರುಗಳನ್ನ ಹೈಕಮಾಂಡ್ ತಿರಸ್ಕರಿಸುತ್ತಾರೆ. ಆಗ ಇಬ್ಬರ ಹೆಸರು ಬೇಡ, ಕಾಂಗ್ರೆಸ್ಸಿಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟರೆ ಹೈಕಮಾಂಡ್ ಸೂಚಿಸಿದ ವ್ಯಕ್ತಿ ಸಭಾಪತಿ ಆಗ್ತಾರೆ. ಜೆಡಿಎಸ್ ಗೆ ಉಪಸಭಾಪತಿ ಎಂದು ತೀರ್ಮಾನದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಇನ್ನೊಂದು ದಾಳ ಉರುಳಿಸ್ತಾರೆ. ಆಗ ಆಪ್ತ ಸ್ನೇಹಿತ ಧರ್ಮೇಗೌಡರ ಹೆಸರನ್ನು ಉಪಸಭಾಪತಿ ಸ್ಥಾನಕ್ಕೆ ಪ್ರಸ್ತಾಪಿಸ್ತಾರೆ. ಹೀಗಾಗಿ ಅಂತಿಮವಾಗಿ ಹೆಚ್ ಡಿಕೆ ಹೇಳಿದ ಧರ್ಮೇಗೌಡರೇ ಉಪಸಭಾಪತಿ ಆಗಿ ನೇಮಕವಾಗುತ್ತಾರೆ.

ಪರಿಷತ್ ನಲ್ಲಿ ನಡೆದ ಗಲಾಟೆ :
ಡಿಸೆಂಬರ್ 16 ರಂದು ಪರಿಷತ್ ನಲ್ಲಿ ನಡೆದ ಹೈಡ್ರಾಮಾದಿಂದ ಧರ್ಮೇಗೌಡ ಬೇಸತ್ತಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಪರಿಷತ್ ಗಲಾಟೆ ಬಳಿಕ ಸಭಾಪತಿ ಮೇಲೆ, ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರ ನಡೆ ಎಲ್ಲರ ಗಮನ ಸೆಳೆದಿತ್ತು. ಆದ್ರೆ ಉಪಸಭಾಪತಿ ಧರ್ಮೇಗೌಡ ಒಬ್ಬಂಟಿಯಾಗಿದ್ದರು. ಅಂದೇ ಮಾನಸಿಕವಾಗಿ ಧರ್ಮೇಗೌಡ ಕುಸಿದಿದ್ದರು. ಉಪಸಭಾಪತಿ ಗೌಜು ಗದ್ದಲದಲ್ಲಿ ಧರ್ಮೇಗೌಡರ ಮಾನಸಿಕ ತುಮುಲಗಳನ್ನು ಯಾರೂ ಗಮನಿಸಲಿಲ್ಲ.

ಪರಿಷತ್ ಕಲಾಪದ ಅಂದು ನಡೆದಿದ್ದು:
ವಿಶೇಷ ಅಧಿವೇಶನ ವಿಧಾನಮಂಡಲದ ಇತಿಹಾಸದ ಪುಟಗಳಲ್ಲಿ ಕರಾಳ ಅಧ್ಯಾಯವಾಗಿತ್ತು. ಕಲಾಪದ ಬೆಲ್ ಮುಗಿಯುವ ಮುನ್ನವೇ ಪುಂಡರಂತೆ ಪರಸ್ಪರ ನೂಕಾಟ, ಕೂಗಾಟ, ತಳ್ಳಾಟ, ಎಳೆದಾಟ ಸದಸ್ಯರು ಶುರು ಮಾಡಿದ್ದರು. ಬೆಲ್ ಮುಗಿಯುವ ಮುನ್ನವೇ ಉಪ ಸಭಾಪತಿ ಪೀಠದಲ್ಲಿ ಧರ್ಮೇಗೌಡ ಕುಳಿತಿದ್ದರು. ಉಪಸಭಾಪತಿಯವ್ರನ್ನು ಕೈ ಸದಸ್ಯರು ದರದರನೇ ಎಳೆದು ಹಾಕಲು ಮುಂದಾಗಿದ್ದರು. ಇದನ್ನು ತಡೆದು ಉಪ ಸಭಾಪತಿ ಅವರನ್ನು ಖುರ್ಚಿಯಲ್ಲೇ ಕೂತಿರುವಂತೆ ನೋಡಿಕೊಳ್ಳಲು ಬಿಜೆಪಿ-ಜೆಡಿಎಸ್ ಸದಸ್ಯರು ಕಸರತ್ತು ನಡೆಸಿದ್ದರು. ಈ ವೇಳೆ ಸದಸ್ಯರ ನಡುವೆ ಜಂಗಿ ಕುಸ್ತಿ ಪ್ರಾರಂಭವಾಗಿತ್ತು.

ಆತ್ಮಹತ್ಯೆಯ ಸುತ್ತ ಅನುಮಾನ:
ಕಳೆದ 25 ವರ್ಷದಿಂದ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿ ಹಿಡಿತ ಸಾಧಿಸಿದ್ದ ಧರ್ಮೇಗೌಡ, ಚಿಕ್ಕಮಗಳೂರು ಸಹಕಾರಿ ಧುರೀಣ ರಲ್ಲಿ ಪ್ರಮುಖರೆನ್ನಿಸಿಕೊಂಡಿದ್ದವರು ಇಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಭಾಪತಿ ಆತ್ಮಹತ್ಯೆ ಸುತ್ತ ಅನುಮಾನದ ಆವರಿಸಿದೆ. ರಾಜಕೀಯ ಕಾರಣನಾ? ವೈಯಕ್ತಿಕ ಕಾರಣವಾ? ಮೊನ್ನೆ ಪರಿಷತ್ ಗಲಾಟೆ ವೇಳೆಯೂ ಮಾನಸಿಕವಾಗಿ ಕುಸಿದಿದ್ದ ಧರ್ಮೇಗೌಡರು ಯಾರ ಮೇಲೂ ದೂರದೇ ಮೌನಕ್ಕೆ ಶರಣಾಗಿದ್ದರು. ಪರಿಷತ್ ಒಳಗೆ ಗಲಾಟೆ ಆದ ಬಳಿಕ ರಾಜಕೀಯ ಕಿತ್ತಾಟದ ಬಗ್ಗೆ ಅಸಮಾಧಾನಗೊಂಡಿದ್ದರು. ಧರ್ಮೇಗೌಡ ಅವರು 2004 ರಲ್ಲಿ ಬೀರೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ವಿಂಗಡನೆ ನಂತರ ನೀರೂರು ಕ್ಷೇತ್ರ ಇಲ್ಲವಾದ ನಂತರ ಚುನಾವಣಾ ರಾಜಕಾರಣದಿಂದ ದೂರವಾಗಿದ್ದರು. ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿಡಿತ ಕಳೆದುಕೊಂಡ ನಂತರ ಮಾನಸಿಕ ಖಿನ್ನತೆ ಗೆ ಒಳಗಾಗಿದ್ದರು. ಡಿಸಿಸಿ ಬ್ಯಾಂಕ್ ಚುನಾವಣೆ ಸೋಲಿನ ನಂತರ 1 ದಿನ ಒಬ್ಬರೇ ತೋಟದ ಮನೆಯಲ್ಲಿ ಕಳೆದಿದ್ದರು.

Click to comment

Leave a Reply

Your email address will not be published. Required fields are marked *

Advertisement