Connect with us

Bengaluru City

ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

Published

on

Share this

ಚಿಕ್ಕಮಗಳೂರು: ಬೈಕ್ ಅಪಘಾತಕ್ಕೀಡಾಗಿ ಇಂದು ಮುಂಜಾನೆ ಕೊನೆಯಿಸಿರೆಳೆದ ಸ್ಯಾಂಡಲ್‍ವುಡ್ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ನಡೆಯಿತು.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ವಿಜಯ್ ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಕಪ್ಪೂರು ಶ್ರೀಗಳ ನೇತೃತ್ವದಲ್ಲಿ ವಿಜಯ್ ಸಹೋದರನಿಂದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು. ಅಂತ್ಯಕ್ರಿಯೆ ಮೊದಲು ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ಅಮೆರಿಕದ ರಾಯಭಾರ ಕಚೇರಿಯಿಂದ ವಿಜಯ್ ನಿಧನಕ್ಕೆ ಕನ್ನಡದಲ್ಲೇ ಸಂತಾಪ

ಫಿಲಂ ಚೇಂಬರ್ ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡುವುದಾಗಿ ಹೇಳಿತ್ತು. ಆದರೆ ಚಿಕ್ಕಂದಿನಲ್ಲೇ ಅಪ್ಪ-ಅಮ್ಮನನ್ನ ಕಳೆದುಕೊಂಡರೂ ಗ್ರಾಮದಲ್ಲೇ ಬೆಳೆದು ರಾಷ್ಟ್ರ ಪ್ರಶಸ್ತಿ ಗಳಿಸಿ ಮನೆ ಮಗನ ಅಂತ್ಯಸಂಸ್ಕಾರ ಗ್ರಾಮದಲ್ಲೇ ಆಗಬೇಕೆಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಹಾಗಾಗಿ ಗ್ರಾಮದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ವಿಜಯ್ ಮೃತದೇಹ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಂತೆಯೇ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಿಕ್ಕಿರಿದು ನೆರೆದರು. ನಟನ ಅಂತಿಮ ದರ್ಶನಕ್ಕೆ ಜನಸಾಗರ ನೆರೆದಿದ್ದರಿಂದ ಪೊಲಿಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಯಿತು.  ಇದನ್ನೂ ಓದಿ: ’10 ಸಾವಿರಕ್ಕೆ ನಾನ್ಯಾಕ್ ಬರ್ಲಿ ಹೋಗ್ರಿರಿ’ – ಆಯೋಜಕರ ಹೃದಯ ಕದ್ದ ಸಂಚಾರಿ ವಿಜಯ್

ನಡೆದಿದ್ದೇನು..?
ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಿಜಯ್ ಮನೆ ಸಮೀಪವೇ ಅಪಘಾತ ಸಂಭವಿಸಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಜಯ್ ಅವರು ಬೈಕಿನಿಂದ ಬಿದ್ದು ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದರಿಂದ ನಟ ಕೋಮಾಕ್ಕೆ ಜಾರಿದ್ದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?

ಇತ್ತ ನಿನ್ನೆ ಬೆಳಗ್ಗೆ ವೈದ್ಯರು ನಟನ ಆರೋಗ್ಯದ ಬಗ್ಗೆ ಮಾತನಾಡಿ, ಬ್ರೈನ್ ನಿಷ್ಕ್ರಿಯಗೊಂಡಿದ್ದು, ಉಸಿರಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ನಡುವೆ ವಿಜಯ್ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದರು. ಕುಟುಂಬದ ಇಚ್ಛೆಯಂತೆ 2 ಕಿಡ್ನಿ, 2 ಕಣ್ಣು, ಯಕೃತ್ತು, ಶ್ವಾಸಕೋಶ, 21 ಹೃದಯದ ಕವಾಟಗಳನ್ನು ದಾನ ಮಾಡಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದವರಿಗೆ ಜೋಡಿಸಲಾಯಿತು. ಇಂದು ಬೆಳಗ್ಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿತ್ತು. ಇದನ್ನೂ ಓದಿ: ಹೋಟೆಲ್‍ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್

ಬೆಳಗ್ಗೆ 6:50ಕ್ಕೆ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ವಿಜಯ್ ಕುಟುಂಬಕ್ಕೆ ನೀಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement