Connect with us

Chikkamagaluru

ಧರ್ಮಸ್ಥಳದ ಹುಂಡಿ ಸೇರಬೇಕಿದ್ದ ಮಾಂಗಲ್ಯ ಸರ ಮತ್ತೆ ಮಹಿಳೆಯ ಕೊರಳು ಸೇರಿತು

Published

on

ಚಿಕ್ಕಮಗಳೂರು: ಧರ್ಮಸ್ಥಳ ಮುಂಜುನಾಥನ ಹುಂಡಿಗೆ ಸೇರಬೇಕಿದ್ದ ಮಾಂಗಲ್ಯ ಸರ ಮತ್ತೆ ಮಹಿಳೆ ಕೊರಳು ಸೇರಿರುವ ಅಪರೂಪದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಫೆಬ್ರವರಿ 6ರಂದು ಶಿಕ್ಷಕಿ ಹೇಮಲತಾ ಪತಿ ಯೋಗೀಶ್ ಜೊತೆ ಆಟದ ಮೈದಾನವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಮಾಂಗಲ್ಯ ಸರ ಕಳೆದುಕೊಂಡಿದ್ದರು. ನಂತರ ಮಾಂಗಲ್ಯ ಸರ ಯುವಕ ವಿನೋದ್ ಹಾಗೂ ರಾಘವೇಂದ್ರ ಎಂಬವರಿಗೆ ಸಿಕ್ಕಿದೆ. ಈ ವಿಚಾರವಾಗಿ ಇವರಿಬ್ಬರು ಮಾಂಗಲ್ಯ ಸರ ಸಿಕ್ಕಿದ್ದು, ಸರ ನಿಮ್ಮದೇ ಆಗಿದ್ದರೆ ಕರೆ ಮಾಡಿ ಸರ ಸ್ವೀಕರಿಸಿ ಎಂದು ಮೈದಾನದ ಸುತ್ತಾಮುತ್ತ ನಾಮಫಲಕಗಳನ್ನು ಹಾಕಿದ್ದರು.

ಮಾಂಗಲ್ಯ ಸರ ಕಳೆದುಕೊಂಡ ದಂಪತಿ ಮನನೊಂದು ವಾಕ್ ಬರುವುದನ್ನೆ ನಿಲ್ಲಿಸಿದ್ದರು. ಒಮ್ಮೆ ಶನಿವಾರ ಯೋಗೀಶ್ ಮತ್ತೆ ವಾಕಿಂಗ್‍ಗೆಂದು ಬಂದಾಗ ಸರದ ಬಗೆಗೆ ಹಾಕಿದ್ದ ನಾಮಫಲಕವನ್ನು ನೋಡಿದ್ದಾರೆ. ಬಳಿಕ ಮೊಬೈಲ್ ತರದ ಕಾರಣ ಆ ನಾಮಫಲಕವನ್ನೇ ಕಿತ್ತುಕೊಂಡು ಮನೆಗೆ ಹೋಗಿ ಕರೆ ಮಾಡಿದ್ದಾರೆ. ಆಗ ವಿನೋದ್ ಧರ್ಮಸ್ಥಳ ಬಂದಿರುವುದಾಗಿ ತಿಳಿಸಿ, ನಾಳೆ ಬಂದು ನಿಮ್ಮ ಸರ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದಾರೆ.

ಅದೇ ರೀತಿ ಧರ್ಮಸ್ಥಳದಿಂದ ಹಿಂದಿರುಗಿದ ವಿನೋದ್ ಹಾಗೂ ರಾಘವೇಂದ್ರ ಸರದ ಮಾಲೀಕ ಪೇದೆ ಯೋಗೀಶ್ ಹಾಗೂ ಶಿಕ್ಷಕಿ ಹೇಮಲತ ಅವರಿಗೆ ಸರವನ್ನು ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಾಂಗಲ್ಯ ಸರ ಸುಮಾರು 11.500 ಗ್ರಾಂ ಇದ್ದು, ಅಂದಾಜು 60 ಸಾವಿರ ರೂ. ಆಗಿದೆ. ನೂರು ರೂಪಾಯಿ ಸಿಕ್ಕಿದರೂ ವಾಪಸ್ ಕೊಡದ ಈ ಕಾಲದಲ್ಲಿ 60 ಸಾವಿರ ಮೌಲ್ಯದ ಬಂಗಾರದ ಸರವನ್ನು ಹಿಂದಿರುಗಿಸಿದ ವಿನೋದ್ ಹಾಗೂ ರಾಘವೇಂದ್ರ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ.


ಹುಂಡಿ ಸೇರುತ್ತಿದ್ದ ಸರ : ಏಳು ದಿನವಾದರೂ ಸರದ ಮಾಲೀಕರು ಯಾರೂ ಕೇಳದ, ಫೋನ್ ಮಾಡದ ಹಿನ್ನೆಲೆ ವಿನೋದ್ ಹಾಗೂ ರಾಘವೇಂದ್ರ ಅವರು ಮೂರ್ನಾಲ್ಕು ದಿನ ನೋಡಿ ಸರವನ್ನ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹುಂಡಿಗೆ ಹಾಕಲು ತೀರ್ಮಾನಿಸಿದ್ದರು. ಆದರೆ, ಸರ ಕಳೆದುಕೊಂಡ ಹೇಮಲತಾ ಅವರ ಅದೃಷ್ಟ ಹಾಗೂ ಚೆನ್ನಾಗಿತ್ತು. ಇದರಿಂದ ಹೇಮಲತಾ ಕೂಡ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲೆ, ಮನೆ, ಆಟದ ಮೈದಾನ ಎಲ್ಲಾ ಕಡೆ ಹುಡುಕಿದ್ದೆ. ಎಲ್ಲೂ ಸರ ಸಿಕ್ಕಿರಲಿಲ್ಲ. ಮಾಂಗಲ್ಯ ಸರ ಎಂದು ತುಂಬಾ ನೋವಾಗಿತ್ತು. ಸರ ಸಿಕ್ಕಿದ್ದು ತುಂಬಾ ಖುಷಿಯಾಯ್ತು ಎಂದಿದ್ದಾರೆ.

ಮತ್ತೊಮ್ಮೆ ಮದುವೆ : ವಾರದಿಂದ ಹುಡುಕಾಡಿದ ಸರ ಸಿಕ್ಕ ಖುಷಿಯಲ್ಲಿ ಪೇದೆ ಯೋಗೀಶ್ ಹಾಗೂ ಶಿಕ್ಷಕಿ ಹೇಮಲತಾ ಪ್ರೇಮಿಗಳ ದಿನದಂದೇ ಮತ್ತೊಮ್ಮೆ ಮದುವೆಯಾಗಿದ್ದಾರೆ. ಸರ ಸಿಕ್ಕ ಖುಷಿಯಲ್ಲಿ ನಗರದ ಬೋಳರಾಮೇಶ್ವರ ದೇವಾಲಯದ ಮುಂಭಾಗ ಯೋಗೀಶ್ ಮತ್ತೊಮ್ಮೆ ಪತ್ನಿ ಕೊರಳಿಗೆ ಮಾಂಗಲ್ಯ ಸರವನ್ನ ಕಟ್ಟಿದ್ದಾರೆ.

ಈ ವೇಳೆ, ಸರವನ್ನ ಹಿಂದಿರುಗಿಸಿದ ವಿನೋದ್, ರಾಘವೇಂದ್ರ ಹಾಗೂ ಅವರ ಪತ್ನಿ ಕೂಡ ಜೊತೆಗಿದ್ದರು. ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನ ವಾರಗಳ ಕಾಲ ಕಷ್ಟಪಟ್ಟು ವಿಭಿನ್ನ ಪ್ರಯತ್ನದ ಮೂಲಕ ನೊಂದ ಮಹಿಳೆಯ ಕೊರಳು ಸೇರಿಸಿದ ವಿನೋದ್ ಹಾಗೂ ರಾಘವೇಂದ್ರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಈ ಕಾರ್ಯಕ್ಕೆ ನಗರದ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಇದು ಮಾದರಿ ಹಾಗೂ ಎಲ್ಲರೂ ಈ ನಡೆಯನ್ನ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *