Sunday, 22nd September 2019

ಭೂಮಿ ಒಳಗೆ-ಹೊರಗೆ ಹೆಚ್ಚಿದ ತೇವಾಂಶ, ರಸ್ತೆಗೆ ಬರ್ತಿವೆ ಹೆಬ್ಬಾವು

ಚಿಕ್ಕಮಗಳೂರು: ಭೂಮಿಯ ಒಳಗೆ ಹಾಗೂ ಹೊರಗೆ ತೇವಾಂಶ ಹೆಚ್ಚುತ್ತಿರುವುದರಿಂದ ಕಾಳಿಂಗ ಸರ್ಪ, ಹೆಬ್ಬಾವಿನಂತ ಸರಿಸೃಪಗಳು ರಸ್ತೆ, ಮನೆ, ಕೊಟ್ಟಿಗೆಗಳಿಗೆ ಬರುತ್ತಿರುವುದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಯತೇಚ್ಛವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಭೂಮಿ ಸಾಕಷ್ಟು ತೇವಗೊಂಡಿದ್ದು, ಬೆಚ್ಚಗಿದ್ದ ಹಾವುಗಳು ಜನಸಾಮಾನ್ಯರಂತೆ ರಸ್ತೆಗಳಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಯ ನಾಲ್ಕನೇ ತಿರುವಿನಲ್ಲಿ ಧೈತ್ಯ ಹೆಬ್ಬಾವೊಂದು ಸೇತುವೆ ಹತ್ತಿಳಿದು ರಸ್ತೆಗೆ ಬರಲು ಯತ್ನಿಸುತ್ತಿರುವ ಫೋಟೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮಲೆನಾಡಿಗರು ಇಷ್ಟು ಗಾತ್ರದ ಹಾಗೂ ಈ ರೀತಿಯ ಹೆಬ್ಬಾವನ್ನು ಕಂಡಿರುವುದು ತೀರಾ ವಿರಳ. ಚಾರ್ಮಾಡಿ ಸಂಪೂರ್ಣ ಅರಣ್ಯದಿಂದ ಕೂಡಿದೆ. ನೂರಾರು ಜಾತಿಯ ಪ್ರಾಣಿ-ಪಕ್ಷಿ, ಸರಿಸೃಪಗಳ ಆವಾಸ ಸ್ಥಾನವಾಗಿದೆ. ನಿರಂತರ ಮಳೆಯಿಂದ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ಉರಗಗಳು ರಸ್ತೆ ಹಾಗೂ ನಗರಕ್ಕೆ ಬಂದು ವಾಸಕ್ಕೆ ಸೂಕ್ತ ಪ್ರದೇಶ ಹುಡುಕುವುದು ಸರ್ವೇ ಸಾಮಾನ್ಯವಾಗಿದೆ.

ಚಾರ್ಮಾಡಿಯ 4ನೇ ತಿರುವಿನಲ್ಲಿ ಕಂಡ ಈ ಹೆಬ್ಬಾವು ಸೇತುವೆ ಮೇಲಿಂದ ಇಳಿಯುತ್ತಿರುವ ದೃಶ್ಯವೂ ಅದ್ಭುತವಾಗಿದೆ. ಅಷ್ಟೇ ಅಲ್ಲದೆ ಮಳೆಯಿಂದ ತೊಯ್ದಿರುವ ಹೆಬ್ಬಾವು ಫಳ-ಫಳನೇ ಹೊಳೆಯುತ್ತಿರುವುದು ನೋಡುಗರಿಗೆ ಆಶ್ಚರ್ಯ ಹಾಗೂ ಭಯದ ಜೊತೆ ಖುಷಿ ತಂದಿದೆ.

Leave a Reply

Your email address will not be published. Required fields are marked *