Connect with us

Chikkamagaluru

ಮನೆಗೆ ಬಂದ ಮಾಜಿ ಪ್ರಿಯಕರನನ್ನು ಪತಿ ಜೊತೆ ಸೇರಿ ಥಳಿಸಿದ ಪ್ರೇಯಸಿ- ಇಬ್ಬರನ್ನು ಕೊಚ್ಚಿ ಕೊಂದ

Published

on

ಚಿಕ್ಕಮಗಳೂರು: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಪ್ರೇಯಸಿ ತನ್ನಿಂದ ದೂರವಾಗಿದ್ದಕ್ಕೆ ಕೋಪಗೊಂಡು, ಪ್ರೇಯಸಿ ಹಾಗೂ ಆಕೆಯ ಪತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘನಘೋರ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನರಸಿಂಪುರ ತಾಲೂಕಿನ ಸಾತ್ಕೋಳಿ ಗ್ರಾಮ ನಿವಾಸಿ ಧರ್ಮಯ್ಯ (40) ಹಾಗೂ ಪತ್ನಿ ಭಾರತಿ (28) ಕೊಲೆಯಾದ ದಂಪತಿ. ಅದೇ ಗ್ರಾಮದ ಗೋವಿಂದ ಕೊಲೆ ಮಾಡಿದ ಆರೋಪಿ. ಕೃತ್ಯ ಎಸಗಿ ಗೋವಿಂದ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಧರ್ಮಯ್ಯ ಹಾಗೂ ಭಾರತಿ ದಂಪತಿ ಕೂಲಿ ಕಾರ್ಮಿಕರಾಗಿದ್ದರು. ಆದರೆ ಭಾರತಿ ಗೋವಿಂದನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ಇತ್ತೀಚೆಗೆ ಧರ್ಮಯ್ಯನಿಗೆ ತಿಳಿದು ಪತ್ನಿಗೆ ಥಳಿಸಿದ್ದ. ಅಷ್ಟೇ ಅಲ್ಲದೆ ಗೋವಿಂದ ಜೊತೆಗೂ ಧರ್ಮಯ್ಯ ಕಳೆದ ತಿಂಗಳು ಜಗಳವಾಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗೋವಿಂದ ಹಾಗೂ ಧರ್ಮಯ್ಯ ಒಂದು ತಿಂಗಳ ಹಿಂದೆಯಷ್ಟೇ ಮತ್ತೆ ಕೈ ಕೈ ಮಿಲಾಯಿಸಿದ್ದರು. ಈ ವೇಳೆ ಗೋವಿಂದ ಮಚ್ಚಿನಿಂದ ಧರ್ಮಯ್ಯನನ್ನು ಹತ್ಯೆ ಮಾಡಲು ಮುಂದಾಗಿದ್ದ. ಆದರೆ ಪತಿಯನ್ನು ರಕ್ಷಿಸಲು ಬಂದಿದ್ದ ಭಾರತಿಯ ಬೆನ್ನಿಗೆ ಮಚ್ಚಿನ ಹೊಡೆತ ಬಿದ್ದಿತ್ತು. ಅದೃಷ್ಟವಶಾಥ್ ಯಾವುದೇ ಪ್ರಾಣಹಾನಿ ಸಂಭಸಿರಲಿಲ್ಲ. ಈ ವಿಚಾರವು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಗ್ರಾಮದ ಹಿರಿಯರು ರಾಜಿ ಸಂಧಾನ ಮಾಡಿಸಿದ್ದರು. ಹೀಗಾಗಿ ಭಾರತಿ ಗೋವಿಂದನ ಸಹವಾಸ ಬಿಟ್ಟಿದ್ದಳು ಎನ್ನಲಾಗಿದೆ.

ತನ್ನಿಂದ ಪ್ರೇಯಸಿ ಭಾರತಿ ದೂರವಾಗಿದ್ದರಿಂದ ಗೋವಿಂದ ಹತಾಶೆಗೊಂಡಿದ್ದ. ಅಷ್ಟೇ ಅಲ್ಲದೆ ಪ್ರೇಯಸಿ ಹಾಗೂ ಆಕೆಯ ಪತಿ ಧರ್ಮಯ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದ. ಪ್ರೇಯಸ್ಸಿಯನ್ನು ಭೇಟಿಯಾಗಲು ಶನಿವಾರ ಆಕೆಯ ಮನೆಗೆ ಹೋಗಿದ್ದ. ಈ ವೇಳೆ ಭಾರತಿ ಹಾಗೂ ಧರ್ಮಯ್ಯ ಒಟ್ಟಾಗಿ ಗೋವಿಂದನಿಗೆ ಥಳಿಸಿದ್ದಾರೆ. ಇದರಿಂದ ಕೋಪಗೊಂಡ ಗೋವಿಂದ ಮಚ್ಚಿನಿಂದ ದಂಪತಿ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾನೆ.

ಘಟನೆಯ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಎನ್.ಆರ್.ಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗೋವಿಂದನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.