Connect with us

Chikkamagaluru

ವೃದ್ಧಾಪ್ಯ ವೇತನ ಕೇಳ ಬಂದ ಅಜ್ಜಿಗೆ ‘ನೀವು ಸತ್ತು ಹೋಗಿದ್ದೀರಾ’ ಎಂದ ಅಧಿಕಾರಿಗಳು

Published

on

– ಬದುಕಿರುವವರನ್ನ ದಾಖಲೆಯಲ್ಲಿ ಸಾಯಿಸಿದ ಗ್ರಾಮ ಲೆಕ್ಕಿಗ!

ಚಿಕ್ಕಮಗಳೂರು: ಆರು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಕೇಳಲು ಹೋದ ವೃದ್ಧೆಗೆ ನೀವು ಸತ್ತು ಹೋಗಿದ್ದೀರಾ ಎಂಬ ಅಧಿಕಾರಿಯ ಮಾತು ಕೇಳಿ ವೃದ್ಧೆ ದಿಗ್ಭ್ರಾಂತರಾದ ಘಟನೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಸಣ್ಣಕೆರೆ ಗ್ರಾಮದ ವೃದ್ಧೆ ಜಯಮ್ಮ ಅವರಿಗೆ ಕಳೆದ ಆರು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿರಲಿಲ್ಲ. ಯಾಕೆ ಎಂದು ಕೇಳಲು ಹೋದಾಗ ತಾಲೂಕು ಪಂಚಾಯಿತಿಯ ಅಧಿಕಾರಿಗಳ ಮಾತು ಕೇಳಿ ವೃದ್ಧಿಗೆ ಬರಸಿಡಿಲು ಬಡಿದಂತಾಗಿದೆ. ವೃದ್ಧೆ ಬ್ಯಾಂಕ್ ಖಾತೆಗೆ ವೃದ್ಧಾಪ್ಯ ವೇತನ ಜನವರಿ ತಿಂಗಳಲ್ಲಿ ಜಮೆ ಆಗಿದ್ದೆ ಕೊನೆ. ಫೆಬ್ರವರಿಯಿಂದ ಹಣ ಜಮೆಯಾಗಿ ಬಂದಿರಲಿಲ್ಲ.

ಕಳೆದ ನಾಲ್ಕೈದು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣಕೆರೆಯ ಜಯಮ್ಮ ತಮ್ಮ ಮನೆಯ ಪಕ್ಕದ ಯುವಕ ಹರೀಶ್ ಎಂಬವನಿಗೆ ತಾಲೂಕು ಕಚೇರಿಯಲ್ಲಿ ವಿಚಾರಿಸಿಲು ಹೇಳಿದ್ದರು. ಬಸ್ ಬೇರೆ ಇಲ್ಲ, ವೃದ್ಧೆ ಅಲ್ಲಿವರೆಗೂ ಹೋಗೋದು ಬೇಡವೆಂದು ಹರೀಶ್ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಬಳಿ ವಿಚಾರಿಸಿದ್ದಾರೆ. ಆಗ ಅಧಿಕಾರಿಗಳು ಜಯಮ್ಮ ಎಂಬುವರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಈ ವಿಷಯ ಕೇಳಿ ಹರೀಶ್ ಎಂಬ ಯುವಕನಿಗೂ ಶಾಕ್ ಆಗಿತ್ತು. ಅಯ್ಯೋ ದೇವ್ರೆ, ಅಜ್ಜಿ ನಮ್ಮ ಪಕ್ಕದ ಮನೆಯಲ್ಲೇ ವಾಸವಿದ್ದಾರೆ. ಇವ್ರು ಸತ್ತಿದ್ದಾರೆ ಅಂತಾರಲ್ಲ ಎಂದು ಆತನಿಗೂ ಕಂಗಾಲಾಗಿದ್ದಾನೆ. ಹರಂದೂರು ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗ ನೇಸರ್ ಎಂಬವರು ವರದಿ ನೀಡಿದ್ದಾರೆ. ಹಾಗಾಗಿ ಸಾಮಾಜಿಕ ಭದ್ರತಾ ಪಿಂಚಣೆ ಯೋಜನೆಯಿಂದ ಬರುವ ಹಣವನ್ನ ತಡೆಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹರಂದೂರು ಗ್ರಾಮ ಪಂಚಾಯಿತಿ ಲೆಕ್ಕಿಗ ನೇಸರ್ ಮಾಡಿದ ಎಡವಟ್ಟಿನಿಂದಾಗಿ ಜಯಮ್ಮ ಎಂಬವರಿಗೆ ಪಿಂಚಣಿ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮ ಲೆಕ್ಕಿಗ ಜಯಮ್ಮ ಅವರ ಮನೆಗೆ ಭೇಟಿ ನೀಡದೆ, ಕಚೇರಿಯಲ್ಲೇ ಕುಳಿತು ವರದಿ ನೀಡಿದ್ದರಿಂದ ಬದುಕಿದ್ದವರು ಸಾವನ್ನಪ್ಪಿದ್ದಾರೆ. ಜಯಮ್ಮ ಸೇರಿದಂತೆ ಅಂತಹ ಹಲವರಿಗೆ ಸರ್ಕಾರದ ಪಿಂಚಣಿ ಹಣ ಬರುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಧಿಕಾರಿಗಳು ಬೇಜವಾವ್ದಾರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.