Connect with us

ಕಾಡಿಗೆ ಬೆಂಕಿ ಹಚ್ಚಿ ಅರಣ್ಯಾಧಿಕಾರಿಗಳ ದಾರಿ ತಪ್ಪಿಸಿ ಗಂಧದ ಮರಗಳ ಕಳ್ಳತನ

ಕಾಡಿಗೆ ಬೆಂಕಿ ಹಚ್ಚಿ ಅರಣ್ಯಾಧಿಕಾರಿಗಳ ದಾರಿ ತಪ್ಪಿಸಿ ಗಂಧದ ಮರಗಳ ಕಳ್ಳತನ

ಚಿಕ್ಕಮಗಳೂರು: ಮರಗಳ್ಳರು ಕಾಡಿಗೆ ಬೆಂಕಿ ಹಚ್ಚಿ ಅರಣ್ಯ ಅಧಿಕಾರಿಗಳ ದಾರಿ ತಪ್ಪಿಸಿ ಗಂಧದ ಮರಗಳನ್ನ ಕಡಿದು ಕದ್ದು ಪರಾರಿಯಾಗಿರೋ ಘಟನೆ ತಾಲೂಕಿನ ಸಖರಾಯಪಟ್ಟಣ ಸಮೀಪದ ಚುರ್ಚೆಗುಡ್ಡದಲ್ಲಿ ನಡೆದಿದೆ.

ತಾಲೂಕಿನ ಹಿರೇಗೌಜ ಸಮೀಪದ ಚುರ್ಚೆಗುಡ್ಡದಲ್ಲಿ ಯತೇಚ್ಛವಾಗಿ ಶ್ರೀಗಂಧದ ಮರಗಳಿವೆ. ಕಳೆದೊಂದು ವಾರದಲ್ಲೇ ಸುಮಾರು 30ಕ್ಕೂ ಹೆಚ್ಚು ಗಂಧದ ಮರಗಳು ಕಳ್ಳರ ಪಾಲಾಗಿವೆ. ಚುರ್ಚೆಗುಡ್ಡದಲ್ಲಿ ಸ್ವಾಭಾವಿಕವಾಗಿ ಬೆಳೆದ ಶ್ರೀಗಂಧದ ಮರಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮರಗಳ್ಳರು ಕಳ್ಳತನ್ಕಕೆ ಇಳಿಯೋ ಮುನ್ನ ಅಷ್ಟೇ ಸಲೀಸಾಗಿ ಅರಣ್ಯ ಇಲಾಖೆಯ ದಿಕ್ಕು ತಪ್ಪಿಸುತ್ತಿದ್ದಾರೆ.

ಚುರ್ಚೆಗುಡ್ಡ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಹುಲುಸಾಗಿ ಬೆಳೆದಿರೋ ಇಲ್ಲಿನ ಶ್ರೀಗಂಧದ ಮರಗಳಿಗೆ ಭಾರೀ ಬೇಡಿಕೆ ಇದೆ. ಹಾಗಾಗಿ ಕಳ್ಳರ ಕಣ್ಣು ಇಲ್ಲಿನ ಮರಗಳ ಮೇಲೆ ಬಿದ್ದಿದೆ. ಮರಗಳ್ಳತನಕ್ಕೆ ಇಳಿಯೋ ಮುನ್ನ ಖದೀಮರ ಗ್ಯಾಂಗ್ ಕಾಡಿನ ಒಂದು ಭಾಗಕ್ಕೆ ಬೆಂಕಿ ಕೊಡುತ್ತಾರೆ. ಅಧಿಕಾರಿಗಳು ಆ ಭಾಗಕ್ಕೆ ದೌಡಾಯಿಸುತ್ತಿದ್ದಂತೆ ಇತ್ತ ತಮ್ಮ ಕೆಲಸ ಮುಗಿಸುತ್ತಿದ್ದಾರೆ. ಅನನ್ಯ ಅರಣ್ಯ ಸಂಪತ್ತು ಹಾಡಹಗಲೇ ಕಳ್ಳರ ಪಾಲಾಗುತ್ತಿದ್ದರು ಅರಣ್ಯ ಇಲಾಖೆ ಮೂಕ ಪ್ರೇಕ್ಷಕರಾಗುವಂತಾಗಿದೆ.

ರಾಜ್ಯ-ದೇಶದಲ್ಲೇ ಚಿಕ್ಕಮಗಳೂರು ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧ ಮರಗಳಿಗೆ ಭಾರೀ ಬೇಡಿಕೆ ಇದೆ. ಈ ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧದ ಮರಗಳು ತುಂಬಾ ಉತ್ಕೃಷ್ಟ ಮಟ್ಟದ್ದು ಅನ್ನೋದು ಗೊತ್ತಾದ ಮೇಲೆ ಇಲ್ಲಿ ಅವ್ಯಾಹತವಾಗಿ ಶ್ರೀಗಂಧ ಕಳ್ಳತನ ನಡೆಯುತ್ತಿದೆ. ಹೀಗೆ ಒಂದೊಂದು ಪ್ರದೇಶವನ್ನ ಟಾರ್ಗೆಟ್ ಮಾಡಿ ಶ್ರೀಗಂಧ ಮರಗಳನ್ನ ಕಡಿಯೋ ಖತರ್ನಾಕ್ ಕಳ್ಳರು ಮರಗಳನ್ನ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದವರೆಗೆ ಸಾಗಿಸುತ್ತಾರೆಂಬ ಅನುಮಾನ ಮೂಡಿದೆ.

ನೇರವಾಗಿ ದೊಡ್ಡ-ದೊಡ್ಡ ಕುಳಗಳ ಸಂಪರ್ಕ ಇಲ್ಲದಿದ್ದರೂ ಕೆಲ ಸ್ಥಳೀಯರ ಸಹಕಾರದಿಂದಲೇ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಬಂದು ಕೃತ್ಯ ಎಸಗುತ್ತಿರೋ ಶಂಕೆ ಕೂಡ ವ್ಯಕ್ತವಾಗಿದೆ. ಸದ್ಯ ಶ್ರೀಗಂಧದ ಮರಗಳ ಕಳ್ಳತನದಿಂದ ಕಂಗೆಟ್ಟಿರುವ ಅರಣ್ಯ ಇಲಾಖೆ ಕಳ್ಳರ ಹೆಡಮುರಿ ಕಟ್ಟಲು ಸಜ್ಜಾಗಿದ್ದು ಹಗಲಿರುಳು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಾ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

Advertisement
Advertisement