Chikkamagaluru
ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

ಚಿಕ್ಕಮಗಳೂರು: ಕಾಂಗ್ರೆಸ್ಸಿನಂತಹ ಜನರನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ. ಏಕೆಂದರೆ ಅವರು ಚುನಾವಣೆಯಲ್ಲಿ ಗೆದ್ದರೆ ಜನಾದೇಶ ಅಂತಾರೆ, ಸೋತರೆ ಇವಿಎಂ ಮೇಲೆ ಆರೋಪಿಸುತ್ತಾರೆ. ಈ ರೀತಿಯ ಜನರನ್ನು ನೀವೆಲ್ಲೂ ನೋಡಲು ಆಗುವುದಿಲ್ಲ ಎಂದು ಸಚಿವ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಾಗೂ ಶಿರಾದಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೋಲು ಗ್ಯಾರಂಟಿಯಿಂದ ಇವಿಎಂ ಮೇಲೆ ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಇವಿಎಂಗೆ ಇಂಟರ್ ನೆಟ್ ಕನೆಕ್ಷನ್ ಇರುವುದಿಲ್ಲ. ಅವರು ಈ ಆರೋಪಗಳಿಗೆ ಸಾಕ್ಷಿ ಕೂಡ ನೀಡಿಲ್ಲ. ಈ ರೀತಿಯ ಆರೋಪ ಮಾಡಿದಾಗ ಚುನಾವಣಾ ಆಯೋಗ ನೀಡಿದ ನೋಟಿಸ್ಗೆ ಉತ್ತರಿಸಲಾಗದೆ ತಡಪಡಿಸಿದ್ದಾರೆ. ನ್ಯಾಯಾಲಯದ ತೀರ್ಪ ಬಂದರೆ ನ್ಯಾಯಾಧೀಶರನ್ನೇ ಅನುಮಾನಿಸೋದು, ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಗೂಬೆ ಕೂರಿಸೋದು, ಕಾಂಗ್ರೆಸ್ಸಿನವರಿಗೆ ಇದೊಂದು ಕೆಟ್ಟ ಖಾಯಿಲೆ. 2018ರ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗೆದ್ದಾಗ ಯಾವುದು ಕೆಲಸ ಮಾಡಿತ್ತು. ಇದೇ ಇವಿಎಂನಲ್ಲಿ ತಾನೇ ಗೆದ್ದದ್ದು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಡಿ.ಕೆ.ರವಿ ತಾಯಿ ಸೊಸೆಯನ್ನು ಗೆಲ್ಲಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ, ಅತ್ತೆ ಸೊಸೆ, ತಾಯಿ ಮಗಳಂತೆ ಇರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳೂ ಇಲ್ಲ, ಬಯಸಿದ್ದೂ ಇಲ್ಲ. ಚುನಾವಣೆ ಮುಗಿದ ಮೇಲೂ ಚೆನ್ನಾಗಿರಲಿ. ಮುಖವನ್ನೇ ನೋಡುವುದಿಲ್ಲ ಎಂದವರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದಿದ್ದಾರೆ. ನಾವು ನಮ್ಮ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇವೆ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಎಂದು ತಿಳಿಸಿದರು.
