Connect with us

ಕೊರೊನಾ ಕಾಲದಲ್ಲಿ ಅಕ್ಷರ ಪ್ರೀತಿ ಬಿತ್ತಿದ ಶಿಕ್ಷಕಿ- ಮಕ್ಕಳು, ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿತ್ತು ಪತ್ರ ಸಂಬಂಧ..!

ಕೊರೊನಾ ಕಾಲದಲ್ಲಿ ಅಕ್ಷರ ಪ್ರೀತಿ ಬಿತ್ತಿದ ಶಿಕ್ಷಕಿ- ಮಕ್ಕಳು, ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿತ್ತು ಪತ್ರ ಸಂಬಂಧ..!

ಚಿಕ್ಕಮಗಳೂರು: ಕೊರೊನಾ ಕಾಲದಲ್ಲಿ ಮಕ್ಕಳು ಶಾಲೆಯನ್ನು ಮಿಸ್ ಮಾಡಿಕೊಂಡಿದ್ದಕ್ಕಿಂತ ಶಿಕ್ಷಕರೇ ಮಕ್ಕಳನ್ನ ಮಿಸ್ ಮಾಡ್ಕೊಂಡಿದ್ದಾರೆ. ಕಾಫಿನಾಡ ಈ ಶಿಕ್ಷಕಿಯಂತೂ ಲಾಕ್‍ಡೌನ್‍ನಲ್ಲೂ ಮಕ್ಕಳ ಮನದಲ್ಲಿ ಅಕ್ಷರದ ಪ್ರೀತಿ ಬಿತ್ತಿದ್ದಾರೆ.

ಹೌದು. ಕೊರೊನಾ ಕಾಲದಲ್ಲಿ ಎಲ್ಲರೂ ಮನೆಯಲ್ಲೇ ಲಾಕ್ ಆಗಿದ್ದಾರೆ. ಶಾಲೆಗೆ ಹೋಗಲಾರದೇ ಪುಟ್ಟ-ಪುಟ್ಟ ಮಕ್ಕಳು ತಮ್ಮ ಸ್ನೇಹಿತರು, ಅಚ್ಚುಮೆಚ್ಚಿನ ಶಿಕ್ಷಕರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಶಿಕ್ಷಕರೂ ಕೂಡ. ಹಾಗಾಗಿ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಗೀತಾ, ತನ್ನ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರೀತಿಯ ಪತ್ರ ಬರೆದು ಆಶ್ಚರ್ಯ ಮೂಡಿಸಿದ್ದಾರೆ. ಪ್ರತಿಯೊಂದು ಮಗುವಿನ ಜೊತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳ ಬುತ್ತಿಯನ್ನ ನೆನಪಿಸಿದ್ದಾರೆ. ಪ್ರತಿಯೊಂದು ಮಗುವಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದ್ದಾರೆ.

ಶಿಕ್ಷಕಿ ಗೀತಾ ಪತ್ರದಲ್ಲಿ ಕೇವಲ ಮಕ್ಕಳ ಯೋಗಕ್ಷೇಮವನ್ನ ಮಾತ್ರ ವಿಚಾರಿಸದೇ ಕೊರೊನಾದ ಬಗ್ಗೆ ಎಚ್ಚರ ವಹಿಸುವಂತೆಯೂ ಕಿವಿಮಾತು ಹೇಳಿದ್ದಾರೆ. ರಜೆ ಇರೋದ್ರಿಂದ ಹೊರಗಡೆ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡೋದಕ್ಕೆ ಹೋಗದಂತೆ ಪತ್ರದಲ್ಲಿ ತಿಳಿ ಹೇಳಿದ್ದಾರೆ. ಜೊತೆಗೆ ಮೊಬೈಲ್‍ನ್ನೂ ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮಕ್ಕಳಿಗೆ ತಿಳಿ ಹೇಳಿ ಪತ್ರ ಬರೆದಿದ್ದಾರೆ. ಮಕ್ಕಳು ಕೂಡ ಮಿಸ್ ಪ್ರೀತಿಯಿಂದ ಬರೆದ ಪತ್ರವನ್ನ ಬೀರುವಿನಲ್ಲಿ ಜೋಪಾನವಾಗಿಟ್ಟಿದ್ದಾರೆ. ಶಿಕ್ಷಕಿ ಗೀತಾಗೂ ಮಕ್ಕಳು ಪ್ರೀತಿಯಿಂದ ಪತ್ರ ಬರೆದು ಖುಷಿ ಪಟ್ಟಿದ್ದಾರೆ. ಪೋಷಕರು ಕೂಡ ಶಿಕ್ಷಕಿಯ ಪತ್ರ ಬರಹಕ್ಕೆ ಖುಷಿ ಪಟ್ಟಿದ್ದಾರೆ.

ಶಿಕ್ಷಕಿಯ ಪತ್ರ ಮಕ್ಕಳು-ಶಿಕ್ಷಕರು ಮಧ್ಯೆ ಹೊಸ ಬಾಂಧವ್ಯ ಬೆಸೆದಿದೆ. ಒಟ್ಟಾರೆ ಶಾಲೆಯಿಂದ ದೂರ ಉಳಿದ ಪ್ರತಿಯೊಂದು ಮಗುವಿಗೂ ಪತ್ರ ಬರೆದ ಶಿಕ್ಷಕಿಯ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement