Connect with us

Chikkamagaluru

ಫೇಸ್‍ಬುಕ್‍ನಲ್ಲಿ ಫೇಮಸ್ ಆಗಲು ಅಡ್ಡದಾರಿ – ಬರೀಗೈಲಿ ಕಾಲೇಜಿನ ಕಿಟಿಕಿ ಗಾಜು ಒಡೆದ ವಿದ್ಯಾರ್ಥಿ

Published

on

– ಕಾಲೇಜಿನಿಂದ ಸಸ್ಪೆಂಡ್, ಕಂಪ್ಲೆಂಟ್

ಚಿಕ್ಕಮಗಳೂರು: ತಾನೂ ಓದುತ್ತಿರೋ ಕಾಲೇಜಿನ ಶೌಚಾಲಯದ ಕಿಟಕಿಯ ಗ್ಲಾಸನ್ನು ಬರೀಗೈಲಿ ತಾನೇ ಒಡೆದು ಅದರ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯನ್ನ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಈ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಶೌಚಾಲಯದ ಕಿಟಕಿಯನ್ನ ಒಡೆದ ವಿದ್ಯಾರ್ಥಿಯನ್ನ ಅಕ್ಷಯ್ (ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಈತ ಈ ರೀತಿ ತಾನು ಓದುತ್ತಿರೋ ಕಾಲೇಜಿನ ಕಿಟಕಿಯನ್ನ ಒಡೆದದ್ದು ಕೋಪಕ್ಕೋ… ತಾಪಕ್ಕೋ…. ಹಠಕ್ಕೋ… ಅಹಂಕಾರಕ್ಕೋ… ಶೋಕಿಗೋ…. ಗೊತ್ತಿಲ್ಲ. ಆದರೆ ಆತ ಈ ರೀತಿ ಸುಮಾರು ನಾಲ್ಕು ಎಂಎಂನಷ್ಟು ದಪ್ಪದ ಕಿಟಕಿ ಗ್ಲಾಸ್ ಒಡೆದದ್ದನ್ನ ವೀಡಿಯೋ ಮಾಡಿ ತಾನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಶಾಲಾ-ಕಾಲೇಜಿನ ಮುಂದೆ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ವಿದ್ಯಾರ್ಥಿಯೇ” ಎಂದು ಬರೆದಿರುತ್ತಾರೆ. ಆದರೆ ಈತನ ನಡೆ ಕಂಡು ಉಪನ್ಯಾಸಕ ವೃಂದ ಹಾಗೂ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಕಾಲೇಜಿನ ಆವರಣದಲ್ಲಿ ಈ ರೀತಿ ವರ್ತಿಸಿರುವುದರಿಂದ ಕಾಲೇಜಿನ ಪ್ರಾಂಶುಪಾಲರು ಶಾಲಾ ಆಡಳಿತ ಮಂಡಳಿ ಜೊತೆ ಚರ್ಚಿಸಿ ಈತನನ್ನ ಒಂದು ವಾರಗಳ ಕಾಲ ಸಸ್ಪೆಂಡ್ ಮಾಡಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಯ ಪೋಷಕರ ಗಮನಕ್ಕೂ ತಂದು ಮಗನಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದಾರೆ. ಸಾಲದಕ್ಕೆ ಈತ ಕಾಲೇಜಿಗೆ ಬರೋದೇ ಅಮವಾಸ್ಯೆ-ಹುಣ್ಣಿಮೆಗೊಮ್ಮೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕಂಡ ಮೂಡಿಗೆರೆ ಜನ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಕಾಲೇಜು ಆಡಳಿತ ಮಂಡಳಿ ಆ ವಿದ್ಯಾರ್ಥಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಇವತ್ತು ಈತ ಒಡೆದಿದ್ದಾನೆ, ನಾಳೆ ಮತ್ತೊಬ್ಬ ಒಡೆಯುತ್ತಾನೆ. ಒಬ್ಬರಿಂದ ಒಬ್ಬರು ಅದೇ ಕೆಲಸ ಮಾಡಿ ಕಾಲೇಜಿಗೆ ಕೆಟ್ಟ ಹೆಸರು ತರುತ್ತಾರೆಂದು ಅಸಮಾಧಾನ ಹೊರಹಾಕಿದ್ದಾರೆ. ಹೊರಗಡೆ ಏನಾದ್ರು ಮಾಡಿಕೊಳ್ಳಲಿ. ಕಾಲೇಜಿನ ಆವರಣದಲ್ಲಿ ಈ ರೀತಿ ಮಾಡೋದು ತಪ್ಪು. ಜ್ಞಾನದ ದೇಗುಲದಲ್ಲಿ ಶೋಕಿಗೆ ಈ ರೀತಿ ವರ್ತಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಅನ್ನೋದು ಸ್ಥಳಿಯರ ಆಗ್ರಹವಾಗಿದೆ. ಕಾಲೇಜು ಅಂದ ಮೇಲೆ ಹುಡುಗರ ಮಧ್ಯೆ ಗಲಾಟೆ ಕಾಮನ್. ಆದರೆ, ಸಿನಿಮಾ ನೋಡಿ ಈ ರೀತಿ ಶೋಕಿ ಮಾಡುವವರನ್ನ ಕ್ಷಮಿಸಬಾರದು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *