Thursday, 14th November 2019

ಜಿಲ್ಲಾಡಳಿತದ ಆದೇಶದಿಂದ ಚಾರ್ಮಾಡಿಯಲ್ಲಿ ಕೋತಿಗಳು ಫುಲ್ ಖುಷ್

ಚಿಕ್ಕಮಗಳೂರು: ಕೋತಿಗಳ ಕೂಗು ಭಗವಂತನಿಗೂ ಕೇಳಿಸಿದೆ. ಹಣ್ಣು ಕೊಟ್ಟವರಿಗೆ ಖುಷಿ ಪಡಿಸಿ, ಕೊಡದಿದ್ದವರಿಗೆ ಹೆದರಿಸುತ್ತಿದ್ದ ಕೋತಿಗಳ ಮುಖದಲ್ಲಿ ಚೈತನ್ಯವೇ ಇರಲಿಲ್ಲ. ನೆಲದ ಮೇಲಿದ್ದರೂ ನೀರು, ಮರದ ಮೇಲಿದ್ದರೂ ನೀರು. ತಿನ್ನೋಕೂ ಆಹಾರವಿಲ್ಲದೆ ಆಂಜನೇಯನ ಅವತಾರ ಪುರುಷರು ಸೊರಗಿ ಹೋಗಿದ್ದವು. ಆದರೆ ಸರ್ಕಾರದ ಒಂದೇ ಒಂದು ಆದೇಶ ಇದೀಗ ಕೋತಿಗಳಿಗೆ ಜೀವ ತುಂಬಿದಂತಾಗಿದೆ.

ಹೌದು. ವರುಣನ ಅಬ್ಬರಕ್ಕೆ ಇಡೀ ಮಲೆನಾಡೇ ಜಲಾವೃತಗೊಂಡಿತ್ತು. ಚಾರ್ಮಾಡಿ ರಸ್ತೆಯ 23 ಕಿ.ಮೀ. ವ್ಯಾಪ್ತಿಯಲ್ಲಿ 40 ಕಡೆ ಗುಡ್ಡ ಕುಸಿದು, ಎರಡು ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಪ್ರವಾಸಿಗರಿಂದಲೇ ಬದುಕಿದ್ದ ಕೋತಿಗಳ ಸಂತತಿ ತಿನ್ನೋಕೆ ಆಹಾರವಿಲ್ಲದೇ ಬರೀ ನೀರು ಕುಡಿದು ಬದುಕುತ್ತಿದ್ದವು. ಅವುಗಳ ಹಸಿವಿನ ದಾಹ ಆಂಜನೇಯನಿಗೂ ಮುಟ್ಟಿತ್ತು ಅನಿಸುತ್ತಿದೆ. ಯಾಕಂದರೆ ಇದೀಗ ಜಿಲ್ಲಾಡಳಿತ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಹೊಟ್ಟೆ ತುಂಬಾ ಊಟ ಸಿಗುತ್ತದೆಂಬ ಒಂದೇ ಕಾರಣಕ್ಕೆ ಮನುಷ್ಯರಿಗಿಂತ ಮಂಗಗಳು ಡಬಲ್ ಖುಷಿಯಾಗಿವೆ.

ಅಣ್ಣಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಚಾರ್ಮಾಡಿ ಘಾಟ್ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳಿವೆ. ಅಲ್ಲೆಲ್ಲ ನೂರಾರು ಪ್ರವಾಸಿಗರು ಇರುತ್ತಾರೆ. ಪ್ರವಾಸಿಗರ ಗಾಡಿಗಳು ನಿಂತ ಕೂಡಲೇ ಕೋತಿಗಳ ಹಿಂಡು ಮಕ್ಕಳಂತೆ ಓಡೋಡಿ ಬರುತ್ತಿದ್ದವು. ಅಲ್ಲದೇ ಬಂದು ಏನಾದರೂ ಹಾಕುತ್ತಾರಾ ಎಂದು ಕೈಯನ್ನೇ ನೋಡುತ್ತಿದ್ದವು. ಪ್ರವಾಸಿಗರು ಬಾಳೆಹಣ್ಣು, ಬಿಸ್ಕತ್ ಮೊದಲಾದವುಗಳನ್ನು ಹಾಕುತ್ತಿದ್ದರು. ಇತ್ತ ಮಕ್ಕಳಿಗೆ ಕೋತಿಗಳು ಪುಕ್ಕಟೆ ಮನರಂಜನೆ ನೀಡುತ್ತಿದ್ದವು. ಆದರೆ ಈ ಬಾರಿ ಒಂದೇ ದಿನ ಸುರಿದ ಭಾರೀ ಮಳೆಗೆ ಇಡೀ ಚಾರ್ಮಾಡಿಯೇ ಅಲ್ಲೋಲ-ಕಲ್ಲೋಲವಾಗಿತ್ತು. 40 ಕಡೆ ಗುಡ್ಡ ಕುಸಿದಿದ್ದರಿಂದ ಸಂಚಾರ ಬಂದ್ ಆಗಿತ್ತು. ಬೇರೆಡೆ ಹೋಗಲಾಗದೆ, ಊಟ ಸಿಗದೆ ಕೋತಿಗಳ ಸಂತತಿಯೇ ಮಮ್ಮಲ ಮರುಗಿತ್ತು. ಸದ್ಯ ಸರ್ಕಾರ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ಕೋತಿಗಳಲ್ಲಿ ಬದುಕುವ ಆಸೆ ಮೂಡುವಂತಾಗಿದೆ.

ಒಟ್ಟಾರೆ, ರಿಪೇರಿಯೇ ಆಗದಂತ ಸ್ಥಿತಿಯಲ್ಲಿದ್ದ ಚಾರ್ಮಾಡಿಯನ್ನ 300 ಕೋಟಿ ವ್ಯಯ ಮಾಡಿ ದುರಸ್ಥಿಗೆ ಸರ್ಕಾರ ಮುಂದಾಗಿದೆ. ಚಾರ್ಮಾಡಿ ಘಾಟ್ ಮೊದಲಿನಂತಿಲ್ಲ. ದುರಸ್ಥಿ ಮಾಡುತ್ತಿರೋ ಸರ್ಕಾರ ಇದೇ ರೀತಿ ಲಘು ವಾಹನಗಳಿಗಷ್ಟೇ ಅನುಮತಿ ನೀಡಿದರೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಚಾರ್ಮಾಡಿ ಘಾಟ್ ನೆನಪಾಗಷ್ಟೆ ಉಳಿಯೋದ್ರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಪ್ರಕಟಿಸಿದ್ದಾರೆ. ಬಿರುಗಾಳಿ ಸಹಿತ ಭಾರೀ ಮಳಯಾದ ಪರಿಣಾಮ ಹಾಳಾದ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡಲು ಸುಮಾರು 300 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಷರತ್ತು ಏನು?
ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ.

ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *