Connect with us

Chikkaballapur

ಜೆಡಿಎಸ್ ವರಿಷ್ಠರು ನನಗೆ ಮೋಸ ಮಾಡಿದ್ರು – ಬಿಜೆಪಿ ಸೇರಿದ ಮಾಜಿ ಶಾಸಕ ಎಂ ರಾಜಣ್ಣ

Published

on

– ಪಿಕ್ಚರ್ ಬಾಕಿ ಇದೆಯೆಂದ ಸುಧಾಕರ್

ಚಿಕ್ಕಬಳ್ಳಾಪುರ: ಜನತಾ ಪರಿವಾರಕ್ಕೆ ಗುಡ್ ಬಾಯ್ ಹೇಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಘಪರಿವಾರ ಬಿಜೆಪಿ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯಾದರು.

ಚಿಕ್ಕಬಳ್ಳಾಪುರ ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ಭಾವುಟ ಸ್ವೀಕರಿಸಿ, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಶಾಸಕ ಎಂ ರಾಜಣ್ಣ, ಜೆಡಿಎಸ್ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದರು. 2018ರ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಅನ್ನೋ ತೀರ್ಮಾನ ಪಕ್ಷದಲ್ಲಾಗಿತ್ತು. ಆದರೆ ಜೆಡಿಎಸ್ ವರಿಷ್ಠರು ಬಿ ಫಾರಂ ಕೊಡದೆ ನನಗೆ ಮೋಸ ಮಾಡಿಬಿಟ್ಟರು. ಅಂದು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಸೋಲುನುಭವಿಸಿದೆ ಎಂದರು.

ಆದರೆ ಎರಡೂವರೆ ವರ್ಷದಿಂದ ನಾನು ಯಾವುದೇ ಪಕ್ಷ ಸೇರದೆ ಜೆಡಿಎಸ್‍ನಿಂದ ದೂರ ಉಳಿದಿದ್ದೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಸಿಎಂ ಯಡಿಯೂರಪ್ಪನವರ ಆಡಳಿತ ಮೆಚ್ಚಿ ನಾನು ಬಿಜೆಪಿ ಪಕ್ಷ ಸೇರಿದ್ದೇನೆ. ಸದ್ಯ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ನಾಯಕರು ಮುಖಂಡರು ಹತಾಶರಾಗಿದ್ದಾರೆ. ಜೆಡಿಎಸ್ ಮುಳುಗಿದ ಹಡುಗಾಗಿದೆ ಎಂದು ಹೇಳಿದರು.

ನನಗೆ ಅಂದು ಬಿ ಫಾರಂ ಕೊಡದೆ ಮೋಸ ಮಾಡಿದಾಗ ಆನೇಕ ನಿಷ್ಠಾವಂತ ಕಾರ್ಯಕರ್ತರು ಕಣ್ಣೀರಿಟ್ಟಿದ್ದರು. ಅದರ ಫಲ ಇಂದು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಈ ಪರಿಸ್ಥಿಗೆ ಬಂದಿದೆ ಎಂದರು. ಕಳೆದ ವಿಧಾಸಭೆ ಚುನಾವಣೆ ವೇಳೆ ಜೆಡಿಎಸ್ ಟಿಕೆಟ್ ಮೇಲೂರು ರವಿಕುಮಾರ್ ಪಾಲಾಗಿದ್ದ ಕಾರಣ ಅಂದು ಪಕ್ಷೇತರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ 4110 ಮತಗಳನ್ನು ಪಡೆದ ಎಂ ರಾಜಣ್ಣ ಸೋಲನುಭವಿಸಿದ್ದರು.

ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಸಚಿವ ಸುಧಾಕರ್, ಆತ್ಮೀಯರು ಗೆಳೆಯರು ಬಿಜೆಪಿ ಪಕ್ಷಕ್ಕೆ ಬಂದಿರೋದು ಸಂತೋಷದ ಸಂಗತಿಯಾಗಿದೆ. ರಾಜಣ್ಣ ನವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮಾಡಲಿದ್ದಾರೆ. ರಾಜಣ್ಣನವರು ಷರತ್ತು ಬದ್ಧರಾಗಿ ಬಿಜೆಪಿ ಸೇರಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡುವ ವಿಚಾರ ಅಂದು ನಮ್ಮ ವರಿಷ್ಠರು ಮತ್ತು ಪಕ್ಷ ತೀರ್ಮಾನ ಮಾಡಲಿದೆ ಎಂದರು.

ಈ ವೇಳೆ ಇದು ಕೇವಲ ಟ್ರೈಲರ್, ಪಿಕ್ಚರ್ ಬಾಕಿ ಇದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇರೆ ಪಕ್ಷಗಳ ಪ್ರಭಾವಿ ನಾಯಕರು ಸೇರಿದಂತೆ ಕೆಲ ಶಾಸಕರು ಬಿಜೆಪಿ ಪಕ್ಷಕ್ಕೆ ಬರಲಿದ್ದಾರೆ. ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಬೇಕು. 5 ಮಂದಿ ಬಿಜೆಪಿ ಶಾಸಕರೇ ಇರಬೇಕು ಅನ್ನೋ ಸಂಕಲ್ಪ ಮಾಡಿದ್ದೇನೆ. ಇದಲ್ಲದೆ ಕೋಲಾರ-ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಬೇಕು. ಮುಂದಿನ ವಿಧಾನಸಭೆಗೆ ಬಲಿಷ್ಠವಾದ ಅಭ್ಯರ್ಥಿಗಳನ್ನು 3 ಜಿಲ್ಲೆಯ ಕ್ಷೇತ್ರಗಳಲ್ಲಿ ಹುಡುಕಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

Click to comment

Leave a Reply

Your email address will not be published. Required fields are marked *