Sunday, 17th November 2019

Recent News

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲೇ ಕಾಲೆಳೆದಾಟ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರಲ್ಲೇ ಪರಸ್ಪರ ಕಾಲೆಳೆದಾಟ ನಡೆದಿದ್ದು, ಹಾಲಿ ಜಿಲ್ಲಾ ಪಂಚಾಯತಿ ಸದಸ್ಯ ಎಚ್.ವಿ ಮಂಜುನಾಥ್ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್‍ಗೆ ಬಹುಮತವಿದ್ದು ಮೊದಲ ಅವಧಿಗೆ ಶಾಸಕ ಸುಧಾಕರ್ ತಂದೆ ಪಿ.ಎನ್ ಕೇಶವರೆಡ್ಡಿ ಅಧ್ಯಕ್ಷರಾಗಿದ್ದರು. ತದನಂತರ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಬೆಂಬಲಿತ ಹೊಸೂರು ಜಿಲ್ಲಾ ಪಂಚಾಯತಿ ಸದಸ್ಯ ಎಚ್.ವಿ ಮಂಜುನಾಥ್ ಆಯ್ಕೆಯಾಗಿದ್ದರು.

ಆದರೆ ಈಗ ಅಧ್ಯಕ್ಷಗಾದಿ ಮೇಲೆ ಮತ್ತೆ ಕಣ್ಣು ಹಾಕಿರುವ ಶಾಸಕ ಸುಧಾಕರ್ ತಮ್ಮ ಬೆಂಬಲಿತರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾಜ್ಯದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಸಂಬಂಧ ನಿನ್ನೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಿ ಹಾಲಿ ಅಧ್ಯಕ್ಷ ಮಂಜುನಾಥ್ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.

ಇಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನಡೆಸಿ ಮಾತನಾಡಿದ ಎಚ್.ವಿ ಮಂಜುನಾಥ್ ರಾಜಕೀಯ ಕಾರಣಕ್ಕೋಸ್ಕರ ಹೈಕಮಾಂಡ್ ಆದೇಶದಂತೆ ತಾನು ನಾಳೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇದಕ್ಕೆ ಮಂಜುನಾಥ್ ಬೆಂಬಲಿಗರು ವಿರೋಧ ಮಾಡಿದ್ದರು. ಅದರೆ ಅಂತಿಮವಾಗಿ ರಾಜೀನಾಮೆ ನೀಡಲು ಹೈಕಮಾಂಡ್ ಸೂಚಿಸಿದ್ದು ಪಕ್ಷದ ಶಿಸ್ತಿನ ಸಿಪಾಯಿಯಾದ ನಾನು ಪಕ್ಷದ ಆದೇಶಕ್ಕೆ ತಲೆಬಾಗಿ ರಾಜೀನಾಮೆ ಕೊಡುತ್ತೇನೆ ಎಂದು ಮಂಜುನಾಥ್ ಹೇಳಿದ್ದಾರೆ.

ಇನ್ನೂ ಮುಂದೆ ಸಾಮಾನ್ಯ ಸದಸ್ಯನಾಗಿ ಕೆಳಗೆ ಕುಳಿತು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಅದರೆ ಈ ಹಿಂದಿನ ಅಧ್ಯಕ್ಷರ ಹಾಗೆ ಅಧ್ಯಕ್ಷ ಸ್ಥಾನದಿಂದ ಹೋದ ಬಳಿಕ ಸಭೆಗಳಿಗೆ ಬಾರದೆ ಇರಲ್ಲ ಎಂದು ಮಾಜಿ ಅಧ್ಯಕ್ಷ ಶಾಸಕ ಸುಧಾಕರ್ ತಂದೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *