Connect with us

Chikkaballapur

ಅನುದಾನ ಜಾಸ್ತಿಯಾಗಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದೆ: ಸುಧಾಕರ್ ವ್ಯಂಗ್ಯ

Published

on

ಚಿಕ್ಕಬಳ್ಳಾಪುರ: ಅನುದಾನ ಜಾಸ್ತಿಯಾಗಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಅನುದಾನ ಎಲ್ಲಿ ಬಂದಿದೆ? ಬಹುಶಃ ಮಂತ್ರಿಯಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ಕೊಟ್ಟಿದ್ದಾರೇನೋ ಗೊತ್ತಿಲ್ಲ. ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಲಿಲ್ಲ. ಇದೇ ಕಾರಣಕ್ಕೆ ಮೈತ್ರಿ ಸರ್ಕಾರದಿಂದ ಹೊರಗೆ ಬಂದೆ ಎಂದು ಅಸಮಾಧಾನ ಹೊರ ಹಾಕಿದರು.

ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋದರು. ಅದು ದ್ವೇಷದ ರಾಜಕಾರಣ ಅಲ್ವಾ? ರಾಮನಗರ, ಮಂಡ್ಯದಲ್ಲಿ ಮೆಡಿಕಲ್ ಕಾಲೇಜು ಇತ್ತು. ಆದರೂ ಕನಕಪುರಕ್ಕೆ ಮೆಡಿಕಲ್ ಕಾಲೇಜು ಯಾಕೆ ಬೇಕಿತ್ತು? ಚಿಕ್ಕಬಳ್ಳಾಪುರ ಜಿಲ್ಲೆಯವರು ಜನರಲ್ಲವೇ? ಯಾವ ಕಾರಣಕ್ಕೆ ಮೆಡಿಕಲ್ ಕಾಲೇಜು ವಾಪಾಸ್ ತೆಗೆದುಕೊಂಡು ಹೋದರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ಕನಕಪುರಕ್ಕೆ 450 ಕೋಟಿ ರೂ. ಕೊಟ್ಟಿದ್ದು ಯಾಕೆ? ಅದೇ ಅನುದಾನದಲ್ಲಿ ಕನಕಪುರಕ್ಕೆ 250 ಕೋಟಿ ರೂ., ಚಿಕ್ಕಬಳ್ಳಾಪುರಕ್ಕೆ 250 ಕೋಟಿ ರೂ. ಕೊಡಬಹುದಿತ್ತು. ಕೆಲವರ ಮೇಲೆ ವಿಶೇಷ ಪ್ರೀತಿ ತೋರಿದರು, ಇನ್ನು ಕೆಲವರನ್ನು ದ್ವೇಷಿಸಿದರು. ಒಂದು ವೇಳೆ ಎಲ್ಲರನ್ನೂ ಸಮಾನವಾಗಿ ನೋಡಿದ್ದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತಿತ್ತು. ಸಮ್ಮಿಶ್ರ ಸರ್ಕಾರ ರಚನೆ ಮಾಡಿ ನಮ್ಮಂತ ಪ್ರಾಮಾಣಿಕರಿಗೆ ತೊಂದರೆ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಹನಲ್ಲವೆಂದು ನ್ಯಾಯಾಲಯ ಹೇಳಿಲ್ಲ. ಆದರೆ ನೇಮಕ ಸಂದರ್ಭದಲ್ಲಿ ನಿಯಮ ಪಾಲನೆಯಾಗಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿದ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್ ಆದೇಶ ಏನೇ ಇದ್ದರೂ ನನ್ನ ನೇಮಕ ಮುಂದುವರಿಸುವುದು, ಸ್ಥಗಿತಗೊಳಿಸುವುದು ಬಿಜೆಪಿ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

ಇದೇ ವೇಳೆ ಅನರ್ಹ ಶಾಸಕರ ಪ್ರಕರಣ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 23ಕ್ಕೆ ಮುಂದೂಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ನ್ಯಾಯ ಪಡೆಯುವುದು ನಮ್ಮ ಮೂಲಭೂತ ಹಕ್ಕು. ನಮ್ಮ ಅಳಲನ್ನು ಸುಪ್ರೀಂಕೋರ್ಟ್ ಮುಂದೆ ತೋಡಿಕೊಂಡಿದ್ದೇವೆ. ನಮಗೆ ನ್ಯಾಯ ಸಿಗುವ ನಿರೀಕ್ಷೆಯಿದೆ. ಪ್ರಕರಣದ ತೀರ್ಪು ಬಂದ ಬಳಿಕ ರಮೇಶ್ ಕುಮಾರ್ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಪರೋಕ್ಷವಾಗಿ ಕಿಡಿಕಾರಿದರು.

ಅನರ್ಹ ಶಾಸಕರಿಗೆ ಮಂತ್ರಿಗಿರಿ ಯಾವಾಗ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವಧೂತರು ವಿನಯ್ ಗೂರೂಜಿ ಬಳಿ ಕೇಳಿಕೊಂಡು ಬರುತ್ತೇನೆ. ಆಮೇಲೆ ನಿಮಗೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.