Chikkaballapur
ಕೈ ಬಿಟ್ಟು ಕಮಲ ಹಿಡಿದ ಪ್ರಭಾವಿ ಮುಖಂಡ ನವೀನ್ ಕಿರಣ್

ಚಿಕ್ಕಬಳ್ಳಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ಕೆ.ವಿ ನವೀನ್ ಕಿರಣ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ನೇತೃತ್ವದಲ್ಲಿ ಯಡಿಯೂರಪ್ಪರನ್ನ ಭೇಟಿಯಾದ ಕೆ ವಿ ನವೀನ್ ಕಿರಣ್, ಇಂದು ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಂದಹಾಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಗೊಂಡಿರೋ ಕೆ.ವಿ ನವೀನ್ ಕಿರಣ್, ತನ್ನ ಹಿತೈಷಿಗಳ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಪಕ್ಷ ತೊರೆಯುವುದಾಗಿ ಹೇಳಿದ್ದರು. ಅಲ್ಲದೆ ಬಿಎಸ್ವೈ ಭೇಟಿಯಾಗಿ ಬಿಜೆಪಿ ಸೇರುವ ಬಗ್ಗೆಯೂ ಪರೋಕ್ಷವಾಗಿ ಬೆಳಿಗ್ಗೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದರು.
ಸದ್ಯ ಸಿಎಂ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು ಬಿಜೆಪಿ ಪಕ್ಷ ಸೇರ್ಪಡೆ ಅಧಿಕೃತವಾಗಿದೆ. ಇನ್ನೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಸದ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧವೇ ಪ್ರತಿಸ್ಪರ್ಧಿಯಾಗಿ ನವೀನ್ ಕಿರಣ್ ಸ್ಪರ್ಧೆ ಮಾಡಿ ಸೋಲನುಭವಿಸಿದ್ರು. ಅಂದಿನಿಂದ ರಾಜಕೀಯವಾಗಿ ಸುಧಾಕರ್ ವಿರೋಧಿಯಾಗಿಯೇ ಇದ್ದ ನವೀನ್ ಕಿರಣ್, ಈಗ ಸ್ವತಃ ಅವರ ನೇತೃತ್ವದಲ್ಲಿ ಬಿಜೆಪಿಗೆ ಜೈ ಎಂದಿದ್ದಾರೆ.
ರಾಜಕೀಯ ನಿಂತ ನೀರಲ್ಲ, ಬದಲಾವಣೆ ಸಹಜ. ವಿರೋಧಿಗಳನ್ನ ಪ್ರೀತಿಸೋದು ಸಹಜ ಅಂತ ತಮ್ಮ ಬಿಜೆಪಿ ಸೇರ್ಪಡೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನ ಬೆಳೆಸಿ ಬೆಂಬಲಿಸಿ ಪೋಷಿಸಿದ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರಿಗೂ ವಿಡಿಯೋ ಮೂಲಕ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಇನ್ನೂ ಸುಧಾಕರ್ ಅವರ ಅಪರೇಷನ್ ಸರ್ಜರಿಗಳು ಮುಂದುವರಿಯುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಟಗೊಳಿಸೋಕೆ ಹಾಗೂ ತಮ್ಮ ನೆಲೆಯನ್ನ ಭದ್ರಪಡಿಸಿಕೊಳ್ಳೊಕೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಪಕ್ಷದವರನ್ನ ಸೆಳೆದು ಬಿಜೆಪಿಗೆ ಬರ ಮಾಡಿಕೊಳ್ಳುವ ಕಾರ್ಯ ಮುಂದುವರಿದಿದೆ.
