ಈದ್ ಮಿಲಾದ್ ಬ್ಯಾನರ್ ತೆರವುಗೊಳಿಸಿದ್ದಕ್ಕೆ ನಗರಸಭೆಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿದ ಯುವಕರು

ಚಿಕ್ಕಬಳ್ಳಾಪುರ: ಈದ್ ಮಿಲಾದ್ ಬಂಟಿಂಗ್ಸ್ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಕ್ಕೆ ಯುವಕರ ಗುಂಪೊಂದು ನಗರಸಭೆಗೆ ನುಗ್ಗಿ ದಾಂಧಲೆ ನಡೆಸಿ, ಪೀಠೋಪಕರಣ ಧ್ವಂಸಗೊಳಿಸಿದ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಈ ಕುರಿತು ನಗರಸಭೆ ಆಯುಕ್ತ ಹರೀಶ್ ಅವರು ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ ಆಸ್ತಿ ಹಾಳು ಮಾಡಿರುವ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಡೆದಿದ್ದು ಏನು?:
ಹಬ್ಬದ ನಿಮಿತ್ತ ಬುಧವಾರ ನಗರಲ್ಲಿ ಈದ್ ಮಿಲಾದ್ ಶುಭಕೋರಿ ಬ್ಯಾನರ್ ಗಳನ್ನು ಹಾಕಲಾಗಿತ್ತು. ಹಬ್ಬ ಮುಗಿದಿದ್ದರಿಂದ ಇಂದು ಬ್ಯಾನರ್ ತೆರವು ಮಾಡುವಂತೆ ಅಧಿಕಾರಿಗಳು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ ನಗರಸಭೆ ಸಿಬ್ಬಂದಿ ಬ್ಯಾನರ್ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಕ್ಕೆ ಒಂದು ಕೋಮಿನ ಯುವಕರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೇರೆಯವರ ಹಬ್ಬ, ಆಚರಣೆಗೆ ಹಾಕಿರುವ ಬ್ಯಾನರ್ ಗಳಿಗೆ ಬಹಳ ದಿನ ಕಾಲಾವಕಾಶ ನೀಡುತ್ತೀರಿ ಎಂದು ಆರೋಪಿಸಿ, ಮೊದಲಿಗೆ 5 ಜನರ ಪ್ರತಿಭಟನೆಗೆ ಕುಳಿತಿದ್ದರು. ವಿಷದ ಬಾಟಲಿ ತೆಗೆದುಕೊಂಡು ಬೆದರಿಕೆ ಹಾಕಿದ್ದಾರೆ. ಇದನ್ನು ಲೆಕ್ಕಿಸದೇ ಸಿಬ್ಬಂದಿ ಬ್ಯಾನರ್ ತೆರವು ಕಾರ್ಯ ಮುಂದುವರಿಸಿದ್ದರು. ಇದರಿಂದ ಕೋಪಗೊಂಡ 40ಕ್ಕೂ ಹೆಚ್ಚಿನ ಯುವಕರ ಗುಂಪು ನಗರಸಭೆಗೆ ನುಗ್ಗಿ ಕಿಟಕಿ ಗಾಜು, ಪೀಠೋಪಕರಣ, ಕೌಂಟರ್ ನಲ್ಲಿದ್ದ ಗಾಜು ಒಡೆದು ಹಾಕಿ ದಾಂಧಲೆ ನಡೆಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *