ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

ರಾಯ್ಪುರ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಗಂಡನ ಸುದ್ದಿಯನ್ನು ನಿರೂಪಕಿಯೊಬ್ಬರು ಓದಿರುವ ಮನಕಲಕುವ ಘಟನೆ ಛತ್ತೀಸ್ಘಡ್ನಲ್ಲಿ ನಡೆದಿದೆ.
ಐಬಿಸಿ 24 ಹೆಸರಿನ ಚಾನೆಲ್ನ ಆಂಕರ್ ಸರ್ಪ್ರೀತ್ ಕೌರ್ ಬೆಳಗ್ಗೆ ನ್ಯೂಸ್ ಲೈವ್ನಲ್ಲಿರುವಾಗ ಮಹಸಮುಂದ್ ಜಿಲ್ಲೆಯ ಪಿತಾರಾ ಎಂಬಲ್ಲಿ ರೆನಾಲ್ಟೋ ಡಸ್ಟರ್ ಕಾರ್ ಅಪಘಾತವಾಗಿ ಕಾರ್ನಲ್ಲಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿರೋ ಸುದ್ದಿ ಬಂದಿತ್ತು. ಕೌರ್ ಗಂಡ ಹರ್ಷಾದ್ ಕವಾಡೆ ಕೂಡ ಅಪಘಾತಕ್ಕೆ ಬಲಿಯಾಗಿದ್ರು. ಸ್ಥಳದಿಂದ ವರದಿಗಾರ ಫೋನ್ ಮೂಲಕ ಮಾಹಿತಿ ಕೊಟ್ಟಿದ್ದರು.
ಕೌರ್ ಅವರಿಗೆ ಸುದ್ದಿಯನ್ನು ಓದುವಾಗ ಅಪಘಾತಕ್ಕೆ ಒಳಗಾದ ಕಾರು ತನ್ನ ಪತಿಯದ್ದೇ ಎಂದು ಗೊತ್ತಾಗಿತ್ತು. ಆದರೂ ಕೌರ್ ಅವರು ಸುದ್ದಿಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣವಾಗಿ ಓದಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸ್ಟುಡಿಯೋ ದಿಂದ ಹೊರ ಬಂದು ಕೌರ್ ಭಾವುಕರಾಗಿ ಕಣ್ಣೀರು ಹಾಕಲು ಪ್ರಾರಂಭಿಸಿದರು ಎಂದು ಚಾನೆಲ್ನ ಮುಖ್ಯಸ್ಥರು ತಿಳಿಸಿದ್ದಾರೆ.
ಐಬಿಸಿ ಚಾನೆಲ್ ಛತ್ತೀಸಘಡ್ ರಾಜ್ಯದ ಬಹು ವೀಕ್ಷಕರನ್ನು ಹೊಂದಿರುವ ಚಾನೆಲ್. ಕಳೆದ 9 ವರ್ಷಗಳಿಂದ ಐಬಿಸಿ 24 ಸುದ್ದಿ ವಾಹಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. 28 ವರ್ಷದ ಕೌರ್ ಒಂದು ವರ್ಷದ ಹಿಂದೆ ಹರ್ಷದ್ ಕಾವಡೆ ಎಂಬವರನ್ನು ವಿವಾಹವಾಗಿದ್ದರು. ಇಬ್ಬರು ರಾಯ್ಪುರ ನಗರದಲ್ಲಿ ವಾಸವಗಿದ್ದರು.
ನಮಗೆ ಕೌರ್ ನ್ಯೂಸ್ ಓದುವಾಗ ಅವರ ಪತಿ ತೀರಿಕೊಂಡಿರೋ ಬಗ್ಗೆ ಗೊತ್ತಿತ್ತು. ಆದ್ರೆ ಹೇಳೋ ಧೈರ್ಯ ಬರಲಿಲ್ಲ. ಕೌರ್ ಧೈರ್ಯವಂತೆ. ನಮಗೆ ಆಕೆಯ ಬಗ್ಗೆ ಹೆಮ್ಮೆ ಇದೆ ಅಂತೆ ವಾಹಿನಿ ಸಂಪಾದಕರು ತಿಳಿಸಿದ್ದಾರೆ.