Recent News

15 ವರ್ಷಗಳ ಹಿಂದಿನ `ದಿ ವಾಲ್’ ದ್ರಾವಿಡ್ ದಾಖಲೆ ಮುರಿದ ಪೂಜಾರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ 193 ರನ್ ಸಿಡಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಆಸೀಸ್ ಸರಣಿಯಲ್ಲಿ ಒಟ್ಟು 1,258 ಎಸೆತಗಳನ್ನು ಎದುರಿಸುವ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದ್ದಾರೆ.

ಟೀಂ ಇಂಡಿಯಾ ಪರ ಆಸೀಸ್ ನೆಲದಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪೂಜಾರ ಪಾತ್ರರಾಗಿದ್ದು, 2003-04 ರ ಆಸೀಸ್ ಸರಣಿಯೊಂದರಲ್ಲಿ 1,203 ಎಸೆತಗಳನ್ನು ಎದುರಿಸಿದ್ದ ರಾಹುಲ್ ದಾಖಲೆಯನ್ನು ಮುರಿದಿದ್ದಾರೆ. ಪಂದ್ಯದಲ್ಲಿ 130 ರನ್ ಗಳಿಂದ 2ನೇ ದಿನದಾಟ ಆರಂಭಿಸಿದ ಪೂಜಾರ 282 ಎಸೆತಗಳಲ್ಲಿ (18 ಬೌಂಡರಿ) 150 ರನ್ ಪೂರ್ಣಗೊಳಿಸಿದರು. ಅಂತಿಮವಾಗಿ 373 ಎಸೆತಗಳನ್ನು ಎದುರಿಸಿ 22 ಬೌಂಡರಿಗಳ ಸಹಾಯದಿಂದ 193 ರನ್ ಸಿಡಿಸಿ ದ್ವಿಶತಕ ಸಿಡಿಸುವ ಹಂತದಲ್ಲಿ ನಾಥನ್ ಲಯನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಟೀಂ ಇಂಡಿಯಾ ಒನ್ ಡೌನ್ ಬ್ಯಾಟ್ಸ್ ಮನ್ ಆಗಿರುವ ಪೂಜಾರ 1,702 ನಿಮಿಷ ಅಂದರೆ 28 ಗಂಟೆ, 22 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ್ದಾರೆ. ಅಲ್ಲದೇ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಪೂಜಾರ ಬ್ಯಾಟಿಂಗ್ ನಡೆಸಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. 32 ವರ್ಷದ ಪೂಜಾರ ಸದ್ಯ 15 ವರ್ಷಗಳ ಹಿಂದಿನ ರಾಹುಲ್ ದ್ರಾವಿಡ್‍ಯನ್ನು ಮುರಿದಿದ್ದು, ಈ ಪಟ್ಟಿಯಲ್ಲಿ 2014-15ರ ಟೂರ್ನಿಯಲ್ಲಿ 1,093 ಎಸೆತಗಳನ್ನು ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. 1977-78 ರ ಟೂರ್ನಿಯಲ್ಲಿ 1,032 ಎಸೆತಗಳನ್ನು ಎದುರಿಸಿದ ಸುನಿಲ್ ಗವಾಸ್ಕರ್ ನಂತರದ ಸ್ಥಾನವನ್ನು ಪಡೆದಿದ್ದಾರೆ.

ಸರಣಿಯಲ್ಲಿ ಪೂಜಾರ 3 ಶತಕಗಳನ್ನು ಸಿಡಿಸಿದ್ದು, ಈ ಮೂಲಕ ಟೀಂ ಇಂಡಿಯಾ ಪರ ಆಸೀಸ್ ವಿರುದ್ಧ 500 ಪ್ಲಸ್ ರನ್ ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ ಮತ್ತು ಕೊಹ್ಲಿ ಮಾತ್ರ 500 ಪ್ಲಸ್ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ ತಂಡದ ಇತರೇ ಆಟಗಾರರೊಂದಿಗೆ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಅಗರ್ವಾಲ್, ಕೊಹ್ಲಿ, ವಿಹಾರಿ, ಪಂತ್‍ರೊಂದಿಗೆ ಕ್ರಮವಾಗಿ 116, 54, 101, 89 ರನ್ ಜೊತೆಯಾತ ನೀಡಿ ಟೀಂ ಇಂಡಿಯಾ ಬೃಹತ್ ಮೊತ್ತ ಗಳಿಸಲು ಕಾರಣರಾಗಿದ್ದಾರೆ. ನಾಥನ್ ಲಯನ್ ಬೌಲಿಂಗ್‍ನಲ್ಲಿ ಪೂಜಾರ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲಾ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *