Wednesday, 23rd October 2019

ಚಿತ್ರರಂಗದಲ್ಲಿ 44 ವರ್ಷ ಪೂರೈಸಿದ ರಜನಿ- ಟ್ವಿಟ್ಟರ್‌ನಲ್ಲಿ ಹಬ್ಬ ಆಚರಿಸಿದ ಅಭಿಮಾನಿಗಳು

ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಪೂರೈಸಿದ್ದಾರೆ. ಈ ದಿನವನ್ನು ರಜನಿ ಅಭಿಮಾನಿಗಳು ಟ್ವಿಟ್ಟರ್‍ನಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

#44YrsofUnmatchableRAJINISM ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪ್ಲಾಟ್‍ಫಾರ್ಮ್‍ಗಳಲ್ಲಿ ರಜನಿ ಅಭಿಮಾನಿಗಳು ಟ್ರೆಂಡಿಂಗ್ ಸೆಟ್ ಮಾಡಿದ್ದಾರೆ. ಈ ಹ್ಯಾಶ್‍ಟ್ಯಾಗ್ ಬಳಸಿ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೂ ಅನೇಕರು ರಜನಿಕಾಂತ್ ವೃತ್ತಿಜೀವನ ಹೊಸ ಸಾಧನೆಗಾಗಿ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದ 68 ವರ್ಷದ ನಟ ರಜನಿಕಾಂತ್ ಅವರು ಮೊದಲು ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಪಾಥಿನಾರು ವಯತಿನಿಲೆ ಮತ್ತು ಆಡು ಪುಲಿ ಆಟಮ್ ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಹೀಗೆ ಪೋಷಕ ಪಾತ್ರಗಳ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದ ರಜನಿಕಾಂತ್, ಹೀರೋ ಪಾತ್ರದಲ್ಲಿ ಮೊದಲು ನಟಿಸಿದ ಚಲನಚಿತ್ರ ಭೈರವಿ ಇದು 1978 ರಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರದ ಬಿಡುಗಡೆಯ ಸಮಯದಲ್ಲಿ ‘ಸೂಪಸ್ಟಾರ್’ ಶೀರ್ಷಿಕೆಯನ್ನು ರಜನಿಕಾಂತ್ ಅವರಿಗೆ ನೀಡಲಾಯಿತು. ಅಂದಿನಿಂದ ತಮಿಳು ಚಿತ್ರರಂಗದ ದೈತ್ಯ ಪ್ರತಿಭೆಯಾಗಿ ಮಾರ್ಪಟ್ಟ ಸ್ಟೈಲಿಶ್ ಸ್ಟಾರ್ ರಜನಿ ಮತ್ತೆ ಹಿಂತಿರುಗಿ ನೋಡಲಿಲ್ಲ.

ರಜನಿ ಅಭಿನಯದ 2007 ರಲ್ಲಿ ಬಿಡುಗಡೆಯಾದ ಶಿವಾಜಿ ಚಿತ್ರದ ಪಾತ್ರಕ್ಕಾಗಿ 26 ಕೋಟಿ ಸಂಭಾವನೆ ಪಡೆದಿದ್ದರು. ಈ ಮೂಲಕ ಆ ಸಮಯದಲ್ಲಿ ಹಾಲಿವುಡ್ ಸ್ಟಾರ್ ಜಾಕಿ ಚಾನ್ ನಂತರ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ಪಡೆದಿದ್ದರು. ಭಾರತ ಇತರ ಪ್ರಾದೇಶಿಕ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುವಾಗ, ರಜನಿಕಾಂತ್ ಅವರು ಹೊರದೇಶದ ಅಂದರೆ 1988 ತೆರೆಕಂಡ ಅಮೆರಿಕನ್ ಚಲನಚಿತ್ರ ಬ್ಲಡ್‍ಸ್ಟೋನ್ ಸೇರಿದಂತೆ ಇತರ ರಾಷ್ಟ್ರಗಳ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

2018ರ ಹೊತ್ತಿಗೆ, ರಜನಿಕಾಂತ್ ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು. ನಾಲ್ಕು ಅತ್ಯುತ್ತಮ ನಟ ಪ್ರಶಸ್ತಿಗಳು ಮತ್ತು ಅತ್ಯುತ್ತಮ ನಟನಿಗಾಗಿ ಎರಡು ವಿಶೇಷ ಪ್ರಶಸ್ತಿಗಳು. ಫಿಲ್ಮ್ ಫೇರ್ ಅತ್ಯುತ್ತಮ ತಮಿಳು ನಟ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಟನೆಯ ಜೊತೆಗೆ ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿಯೂ ಕೆಲಸ ಮಾಡಿರುವ ರಜನಿ, ನಟನ ವೃತ್ತಿಜೀವನದ ಹೊರತಾಗಿ ಲೋಕೋಪಕಾರಿ, ಆಧ್ಯಾತ್ಮಿಕ ಮತ್ತು ದ್ರಾವಿಡ ರಾಜಕೀಯದಲ್ಲಿ ಪ್ರಭಾವ ಬೀರಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಮೇರು ನಟನಾಗಿ ಬೆಳದ ರಜನಿ ಅವರು ಕಲೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ 2000ರಲ್ಲಿ ಪದ್ಮಭೂಷಣ ಮತ್ತು 2016 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 2014 ರಲ್ಲಿ ನಡೆದ ಭಾರತದ 45ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರಿಗೆ “ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವಕ್ಕಾಗಿ ಶತಮಾನೋತ್ಸವ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.

1950 ಡಿಸೆಂಬರ್ 12 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದ ಶಿವಾಜಿ ರಾವ್ ಗಾಯಕ್‍ವಾಡ್ ಇಂದು ರಜನಿಕಾಂತ್ ಎಂಬ ಹೆಸರಿನ ಮೂಲಕ ವಿಶ್ವದಾದ್ಯಂತ ಖ್ಯಾತಿ ಅದವರು. ಅವರ ತಾಯಿ ರಜನಿ 9 ವರ್ಷದ ಮಗುವಾಗಿದ್ದಾಗ ತೀರಿಕೊಂಡರು. ಅವರ ತಂದೆ ರಾಮೋಜಿ ಗಾಯಕ್‍ವಾಡ್ ಅವರು ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದರು. ಈಗ ಭಾರತದ ಸಿನಿಮಾರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ರಜನಿ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ರಜನಿ ಅಭಿನಯದ ಭಾಷಾ, ಶಿವಾಜಿ, ರೋಬೋ, ಇತ್ತೀಚಿಗೆ ತೆರೆಕಂಡ ರೋಬೋ 2 (2.0) ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ರಜನಿಕಾಂತ್ ತನ್ನ ಮುಂದಿನ ಚಿತ್ರ ಎ.ಆರ್.ಮುರುಗದಾಸ್ ಅವರ ದರ್ಬಾರ್‍ ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಜನಿ ಅವರಿಗೆ ನಯನತಾರಾ ಜೋಡಿಯಾಗಿದ್ದಾರೆ. ದರ್ಬಾರ್ ಚಿತ್ರ 2020ಕ್ಕೆ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *