Connect with us

Cricket

ರಾಯುಡು, ಗಾಯಕ್‍ವಾಡ್ ತಾಳ್ಮೆಯ ಆಟಕ್ಕೆ ಚೆನ್ನೈಗೆ ಒಲಿದ ಜಯ – ಆರ್‌ಸಿಬಿಗೆ ಮುಖಭಂಗ

Published

on

– ಚೆನ್ನೈ ಪ್ಲೇ ಆಫ್ ಕನಸು ಇನ್ನೂ ಜೀವಂತ

ದುಬೈ: ಇಂದು ನಡೆದ ಸಂಡೇ ಧಮಾಕದ ಮೊದಲನೇ ಮ್ಯಾಚಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ್ದು, ತನ್ನ ಪ್ಲೇ ಆಫ್ ಕನಸ್ಸನ್ನು ಇನ್ನೂ ಜೀವಂತವಾಗಿ ಇಟ್ಟುಕೊಂಡಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‍ಸಿಬಿ, ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ ಅರ್ಧಶತಕ ಮತ್ತು ಎಬಿಡಿ ವಿಲಿಯರ್ಸ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರಿನಲ್ಲಿ ಕೇವಲ 145 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಅಂಬಾಟಿ ರಾಯುಡು ಮತ್ತು ರುತುರಾಜ್ ಗಾಯಕ್‍ವಾಡ್ ಅವರ ಸೂಪರ್ ಜೊತೆಯಾಟದ ನೆರವಿನಿಂದ ಇನ್ನೂ ಎಂಟು ಬಾಲ್ ಇದ್ದಂತೆ 150 ರನ್ ಹೊಡೆದು ಗೆದ್ದು ಬೀಗಿತು.

ಆರ್‌ಸಿಬಿಗೆ ಮುಖಭಂಗ
ಕಳೆದ ಅಕ್ಟೋಬರ್ 10 ರಂದು ನಡೆದಿದ್ದ ಚೆನ್ನೈ ವಿರುದ್ಧ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿತ್ತು. ಕೊಹ್ಲಿ ಈ ಪಂದ್ಯದಲ್ಲಿ ಭರ್ಜರಿ 52 ಬಾಲಿಗೆ 90 ರನ್ ಚಚ್ಚಿದ್ದರು. ಈ ಮೂಲಕ ಆರ್‌ಸಿಬಿ 37 ರನ್‍ಗಳ ಅಂತರದಲ್ಲಿ ಜಯ ಸಾಧಿಸಿತ್ತು. ಅಂತೆಯೇ ಈ ಪಂದ್ಯದಲ್ಲೂ ಕೂಡ ಬೆಂಗಳೂರು ತಂಡ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಕಳಪೆ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದಿಂದ ಇಂದು ಸೋತು ಭಾರೀ ಮುಖಭಂಗ ಅನುಭವಿಸಿದೆ.

145 ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಯಕ್‍ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಉತ್ತಮ ಜೊತೆಯಾಟವಾಡಿ ಐದು ಓವರ್ ಮುಕ್ತಾಯಕ್ಕೆ 46 ರನ್ ಸಿಡಿಸಿದರು. ಆದರೆ ಐದನೇ ಓವರ್ ಮೊದಲ ಬಾಲಿನಲ್ಲಿ 25 ರನ್ ಗಳಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಮೋರಿಸ್ ಅವರ ಬೌಲಿಂಗ್‍ಗೆ ಔಟ್ ಆದರು.

ನಂತರ ಜೊತೆಯಾದ ಅಂಬಾಟಿ ರಾಯುಡು ಮತ್ತು ಋತುರಾಜ್ ಗಾಯಕವಾಡ್ ಉತ್ತಮ ಅರ್ಧಶತಕದ ಜೊತೆಯಾಟವಾಡಿತು. 49 ಬಾಲಿಗೆ 67 ರನ್ ಜೊತೆಯಾಟವಾಡಿದ ಈ ಜೋಡಿ 13ನೇ ಓವರಿನಲ್ಲಿ ಬೇರ್ಪಟಿತು. 27 ಬಾಲಿಗೆ 39 ರನ್ ಸಿಡಿಸಿ ಆಡುತ್ತಿದ್ದ ಅಂಬಾಟಿ ರಾಯುಡು ಅವರನ್ನು ಯುಜ್ವೇಂದ್ರ ಚಾಹಲ್ ಅವರು ಕ್ಲೀನ್ ಬೌಲ್ಡ್ ಮಾಡಿದರು. ಇದೇ ವೇಳೆ ಆರಂಭದಿಂದಲು ಉತ್ತಮವಾಗಿ ಆಡಿಕೊಂಡು ಬಂದ ಋತುರಾಜ್ ಗಯಕ್‍ವಾಡ್ 42 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.

ನಂತರ ಒಂದಾದ ನಾಯಕ ಎಂಎಸ್ ಧೋನಿ ಮತ್ತು ಋತುರಾಜ್ ಗಾಯಕ್‍ವಾಡ್ ತಾಳ್ಮೆಯಿಂದ ಆಡಿ ತಂಡವನ್ನು ಜಯದ ದಡಕ್ಕೆ ತಂದರು. ಈ ಇನ್ನಿಂಗ್ಸ್ ನಲ್ಲಿ ಉತ್ತಮವಾಗಿ ಆಡಿದ ರುತುರಾಜ್ ಗೈಕ್ವಾಡ್ 51 ಎಸೆತದಲ್ಲಿ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಮೇತ ಬರೋಬ್ಬರಿ 65 ರನ್ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಎಂಎಸ್ ಧೋನಿ 21 ಬಾಲಿಗೆ ಮೂರು ಫೋರ್ ಸಮೇತ 19 ರನ್ ಸಿಡಿಸಿದರು.

Click to comment

Leave a Reply

Your email address will not be published. Required fields are marked *

www.publictv.in