Connect with us

Cricket

ಐಪಿಎಲ್‍ನಲ್ಲಿದೆ ಧೋನಿಗೆ ಸಾಲು ಸಾಲು ದಾಖಲೆಗಳ ಅವಕಾಶ

Published

on

ಚೆನ್ನೈ: ಕ್ರೀಡಾ ಲೋಕದ ಬಹು ನಿರೀಕ್ಷಿತ ಕ್ರಿಕೆಟ್ ಟೂರ್ನಿ ಐಪಿಎಲ್ 14 ನೇ ಆವೃತ್ತಿ ಆರಂಭಗೊಂಡಿದೆ. ಭಾರತ ಸಹಿತ ಹಲವು ವಿದೇಶಿ ಆಟಗಾರರು ಟೂರ್ನಿಯಲ್ಲಿ ಆಡುತ್ತಿದ್ದು, ಹಿರಿಯ ಕಿರಿಯ ಆಟಗಾರರ ಮಹಾ ಸಮ್ಮಿಲನವಾಗುತ್ತಿದೆ. ಈಗಾಗಲೇ 13 ಆವೃತ್ತಿಗಳಲ್ಲಿ ಆಡಿರುವ ಹಲವು ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಪ್ರಾರಂಭಗೊಂಡಿರುವ 14ನೇ ಆವೃತ್ತಿಯಲ್ಲಿ ಮತ್ತೆ ದಾಖಲೆಯ ಪಟ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಇರಾದೆಯಲ್ಲಿ ಹಲವು ಆಟಗಾರರು ಇದ್ದಾರೆ. ಇದೇ ಹಾದಿಯಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಇದ್ದು, ಇವರಿಗೆ ಐಪಿಎಲ್‍ನಲ್ಲಿ ಹಲವು ದಾಖಲೆಗಳನ್ನು ಮಾಡುವ ಸುವರ್ಣ ಅವಕಾಶವಿದೆ.

ಭಾರತ ತಂಡದ ಯಶಸ್ವಿ ನಾಯಕನಾಗಿ ನಿವೃತ್ತಿ ಹೊಂದಿರುವ ಧೋನಿ ಐಪಿಎಲ್‍ನಲ್ಲಿ ಮಾತ್ರ ಆಡುತ್ತಿದ್ದಾರೆ. ಕಳೆದ 13 ಆವೃತ್ತಿಗಳಲ್ಲಿ ಐಪಿಎಲ್‍ನಲ್ಲಿ ಬಿಗ್‍ಹಿಟ್ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಮಾಹಿ ಈ ಬಾರಿ ಐಪಿಎಲ್‍ನಲ್ಲಿ 179 ರನ್ ಬಾರಿಸಿದರೆ, ಅಂತಾರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ ನಲ್ಲಿ 7000 ರನ್ ಬಾರಿಸಿದ ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಈ ಬಾರಿ ಈ ದಾಖಲೆಯ ನಿರೀಕ್ಷೆಯಲ್ಲಿದ್ದಾರೆ ಎಂಎಸ್‍ಡಿ ಅಭಿಮಾನಿಗಳು.

ಐಪಿಎಲ್ ಎಂದರೆ ಸಿಕ್ಸರ್ ಸಿಡಿಸುವ ದಾಂಡಿಗರ ಹಬ್ಬ ಈ ಹಬ್ಬದಲ್ಲಿ ಧೋನಿ ಕೂಡ ಹೆಸವಾಸಿಯಾಗಿದ್ದಾರೆ. ಅದರಲ್ಲೂ ಧೋನಿ ಐಪಿಎಲ್ ಕೆರಿಯರ್‍ ನ ಕೊನೆಯ ಓವರ್, 20ನೇ ಓವರ್‍ ನಲ್ಲಿ ಒಟ್ಟು 49 ಸಿಕ್ಸರ್‍ ಗಳನ್ನು ಈಗಾಗಲೇ ಸಿಡಿಸಿದ್ದಾರೆ ಇನ್ನು ಕೊನೆಯ ಓವರ್‍ ನಲ್ಲಿ ಒಂದು ಸಿಕ್ಸ್ ಸಿಡಿಸಿದರೆ 20ನೇ ಓವರ್‍ ನಲ್ಲಿ 50 ಸಿಕ್ಸ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಧೋನಿ ಪಾಲಾಗಲಿದೆ. ಹಾಗೆ ಐಪಿಎಲ್‍ನಲ್ಲಿ ಧೋನಿ ಒಟ್ಟು 209 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಇದರೊಂದಿಗೆ ವಿಕೆಟ್ ಹಿಂದೆ ಮ್ಯಾಜಿಕ್ ಮಾಡುವ ಧೋನಿ 204 ಪಂದ್ಯಗಳಲ್ಲಿ 4632 ರನ್ ಗಳಿಸಿದ್ದಾರೆ. ಅವರು ಇನ್ನು 368 ರನ್ ಸಿಡಿಸಿದರೆ ವಿಕೆಟ್ ಕೀಪರ್ ಆಗಿ ಐಪಿಎಲ್‍ನಲ್ಲಿ 5000 ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಐಪಿಎಲ್‍ನಲ್ಲಿ 110 ಕ್ಯಾಚ್‍ಗಳನ್ನು ಹಿಡಿಯುವ ಮೂಲಕ ಅತೀ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್ ಅವರ ದಾಖಲೆಯನ್ನು ಮುರಿಯಲು ಧೋನಿಗೆ ಇನ್ನು ಕೇವಲ 2 ಕ್ಯಾಚ್ ಬೇಕಾಗಿದ್ದು, ಈಗಾಗಲೇ 109 ಕ್ಯಾಚ್ ಹಿಡಿದು ಕಾರ್ತಿಕ್ ನಂತರದ ಸ್ಥಾನದಲ್ಲಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಇಬ್ಬರು ಆಟಗಾರರು ಆಡುತ್ತಿದ್ದು ಯಾರ ಹೆಸರಲ್ಲಿ ಈ ದಾಖಲೆ ನಿರ್ಮಾಣವಾಗುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಇಷ್ಟೆಲ್ಲ ಪ್ರಮುಖ ದಾಖಲೆಗಳ ಒಡೆಯನಾಗಲು ಈಗಾಗಲೇ ರಾಂಚಿ ರ‍್ಯಾಂಬೋ ಸಿದ್ಧವಾಗಿದ್ದು ಮುಂದಿನ ಪಂದ್ಯಗಳಲ್ಲಿ ಮಾಹಿಯ ಬ್ಯಾಟಿಂಗ್ ಸೊಗಸನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Click to comment

Leave a Reply

Your email address will not be published. Required fields are marked *