Connect with us

Cinema

ಆ ಸೀರಿಯಲ್ ನಟಿ ಸಾಯೋ ಮುನ್ನ ಫೋನಲ್ಲಿ ವಾಗ್ವಾದ ನಡೆಸಿದ್ದು ಯಾರ ಜೊತೆ?

Published

on

– ಮುಂದುವರಿದ ಪೊಲೀಸ್ ತನಿಖೆ, ಮಹತ್ವದ ವಿಚಾರ ಬಯಲು

ಚೆನ್ನೈ: ಕಳೆದ ವಾರ ಚೆನ್ನೈನ ಹೋಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಖ್ಯಾತ ಸೀರಿಯಲ್ ನಟಿ ವಿ.ಜೆ ಚಿತ್ರಾ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾಯಿತೇ…? ತನ್ನ ತಾಯಿ ಹಾಗೂ ಮದುವೆಯಾಗಬೇಕಿದ್ದ ಹುಡುಗನಿಂದಾಗಿಯೇ ಚಿತ್ರಾ ಸಾವನ್ನಪ್ಪಿದರಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ಮಹತ್ವದ ಅಂಶಗಳು ಬಯಲಾಗಿವೆ ಎನ್ನಲಾಗಿದೆ.

ಸಾಯುವುದಕ್ಕೂ ಕೆಲ ಕಾಲ ಮುನ್ನ ಚಿತ್ರಾ ಫೋನಲ್ಲಿ ಯಾರದೋ ಜೊತೆ ವಾಗ್ವಾದ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ಇದು ಯಾರ ಜೊತೆ ಎಂಬ ಮಾಹಿತಿಯನ್ನು ಪೊಲೀಸರು ಇನ್ನೂ ಬಿಟ್ಟುಕೊಟ್ಟಿಲ್ಲ. ಚಿತ್ರಾ ಮದುವೆಯಾಗಬೇಕಿದ್ದ ಹುಡುಗ ಹೇಮನಾಥ್‍ನನ್ನು ಸತತ ಐದನೇ ದಿನವೂ ಪೊಲೀಸರು ತನಿಖೆ ನಡೆಸಿದ್ದಾರೆ.

ತಾಯಿ ವಿಜಯ ಹಾಗೂ ಪ್ರಿಯಕರ ಹೇಮನಾಥ್ ಅವರಿಂದ ಚಿತ್ರಾ ಅವರ ಮೇಲೆ ತೀವ್ರ ಒತ್ತಡವಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇವರಿಬ್ಬರ ಒತ್ತಡದಿಂದಾಗಿ ಚಿತ್ರಾ ಮಾನಸಿಕವಾಗಿ ತುಂಬಾ ನೊಂದಿದ್ದರು. ಅಲ್ಲದೇ ಸೀರಿಯಲ್ ಶೂಟಿಂಗ್ ಲೊಕೇಷನ್‍ಗೆ ಹೇಮನಾಥ್ ಮದ್ಯಸೇವಿಸಿ ಬಂದು ಚಿತ್ರಾ ಜೊತೆ ಗಲಾಟೆ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬಯಲಿಗೆ ಬಂದಿದೆ.

ಈ ವಿಚಾರ ಗೊತ್ತಾದ ಮೇಲೆ ತಾಯಿ ವಿಜಯಾ ಅವರು ಹೇಮನಾಥ್‍ನನ್ನು ಮದುವೆಯಾಗಬೇಡ, ಬದಲಿಗೆ ಬೇರೆ ಯಾರನ್ನು ಬೇಕಾದರೂ ಮದುವೆಯಾಗು ಎಂದು ಹಠ ಹಿಡಿದಿದ್ದರು. ಆದರೆ ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಫೆಬ್ರವರಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದರೂ ಮನೆಯವರಿಗೆ ಹೇಳದೇ ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದರು. ಒಂದು ಕಡೆ ಅಮ್ಮನ ಒತ್ತಡ, ಇನ್ನೊಂದು ಕಡೆ ಭಾವಿ ಪತಿಯ ಗಲಾಟೆಯಿಂದಾಗಿ ಚಿತ್ರಾ ತುಂಬಾ ನೊಂದಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ.

ಹೇಮನಾಥೇ ಕೊಂದಿದ್ದ ಎಂದು ಆರೋಪ: ನನ್ನ ಮಗಳನ್ನು ಹೇಮನಾಥ್ ಹೊಡೆದು ಸಾಯಿಸಿದ್ದಾನೆ. ಅವಳ ಸಾವಿಗೆ ಹೇಮನಾಥ್ ಕಾರಣ. ಅಲ್ಲದೇ ಚಿತ್ರಾ ಮುಖದಲ್ಲಿ ಗಾಯದ ಗುರುತುಗಳಿದ್ದವು ಎಂದು ತಾಯಿ ವಿಜಯಾ ಆರೋಪ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಈ ಗಾಯಗಳು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಚಿತ್ರಾಳೇ ಮುಖವನ್ನು ಪರಚಿಕೊಂಡಿರೋದು ಎಂದು ಉಲ್ಲೇಖಿಸಲಾಗಿದೆ.

ಹೋಟೆಲ್ ರೂಂನಲ್ಲಿ ಸಿಕ್ಕಿದ್ದ ಚಿತ್ರಾಳ ಮೊಬೈಲ್ ಫೋನನ್ನು ಹೆಚ್ಚಿನ ಪರಿಶೀಲನೆಗಾಗಿ ಫಾರೆನ್ಸಿಕ್ ಲ್ಯಾಬ್‍ಗೆ ಕಳಿಸಲಾಗಿತ್ತು. ಈ ವೇಳೆ ಫೋನ್ ಕರೆ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in