Crime
ಆನ್ಲೈನ್ ಆ್ಯಪ್ನಲ್ಲಿ ಸಾಲ ಕೊಡುವುದಾಗಿ ವಂಚನೆ – ಇಬ್ಬರು ಚೀನಿಯರ ಬಂಧನ

ಚೆನ್ನೈ: ಆನ್ಲೈನ್ ಆ್ಯಪ್ನಲ್ಲಿ ಸಾಲ ಕೊಡುವುದಾಗಿ ವಂಚಿಸಿರುವ ಇಬ್ಬರು ಚೀನಿಯರು ಸೇರಿದಂತೆ ನಾಲ್ವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಚೀನೀಯರನ್ನು ಕ್ಸಿಯಾ ಯಾ ಮೌ(38) ಮತ್ತು ಯುವಾನ್ ಲನ್( 28) ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಚೀನಿಯರು ಸಿಂಗಾಪುರಕ್ಕೆ ಪರಾರಿಯಾಗಿದ್ದಾನೆ. ಈ ಪ್ರಕರಣದಲ್ಲಿ ರಾಜ್ಯದ ಎಸ್. ಪ್ರಮೋದ್ ಮತ್ತು ಸಿ.ಆರ್. ಪವನ್ ಎಂಬವರನ್ನು ಬಂಧಿಸಲಾಗಿದೆ.
ಶೇ.36 ರಷ್ಟು ಬಡ್ಡಿದರದಲ್ಲಿ ಕ್ಷಣಮಾತ್ರದಲ್ಲಿ ಸಾಲವನ್ನು ನೀಡುತ್ತೇವೆ ಎಂದು ಕಾನೂನು ಬಾಹೀರವಾಗಿ ಮೈಕ್ರೋ ಫೈನಾನ್ಸಿಂಗ್ ಆ್ಯಪ್ಗಳ ಮೂಲಕವಾಗಿ ಸಾಲವನ್ನು ನೀಡಿ, ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ದೇಶದಾದ್ಯಂತ 24ಕ್ಕೂ ಹೆಚ್ಚು ಆ್ಯಪ್ಗಳ ಮೂಲಕವಾಗಿ 1 ಲಕ್ಷಕ್ಕೂ ಹೆಚ್ಚು ಜನರಿಗೆ 5,000 ರೂಪಾಯಿಯಿಂದ 50 ಸಾವಿರ ರೂಪಾಯಿಗಳವರಗೆ ಸಾಲ ನೀಡುತ್ತಿದ್ದರು. ಈವರೆಗೆ ಸುಮಾರು 300 ಕೋಟಿ ರೂಪಾಯಿ ಸಾಲ ನೀಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಐಸಿಐಸಿ ಬ್ಯಾಂಕ್ ಮತ್ತು ಆರ್ಬಿಎಲ್ ಬ್ಯಾಂಕಿಗೆ 48 ಲಕ್ಷ ರೂ ಮತ್ತು 1.96 ಕೋಟಿ ರೂಪಾಯಿ ಜಮಾ ಆಗಿರವ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಸಾಲ ಮರುಪಾವತಿ ಮತ್ತು ಬಡ್ಡಿಯ ಮೊತ್ತ ಯಾವ ಖಾತೆಗೆ ಜಮೆಯಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿಲ್ಲ.
ಆನ್ಲೈನ್ ಮೂಲಕವಾಗಿ ಸಾಲ ನೀಡುವ ಹಣಕಾಸು ವ್ಯವಹಾರ ಸಂಪೂರ್ಣ ಹೊಣೆಯನ್ನು ಚೀನಿಯರು ಹೊತ್ತಿದ್ದರು. ಕಳೆದ 20 ದಿನಗಳಿಂದ ಸಿಸಿಬಿ ತಂಡ ತನಿಖೆ ನಡೆಸುತ್ತಿತ್ತು. ಆ್ಯಪ್ ಸಾಲ ಪ್ರಕರಣದಲ್ಲಿ ಈವರೆಗೆ ದೇಶದ ವಿವಿಧ ಭಾಗಗಳಲ್ಲಿ ಐವರು ಚೀನಿಯರನ್ನು ಬಂಧಿಸಲಾಗಿದೆ ಎಂದು ಸೆಂಟ್ರಲ್ ಕ್ರೈಂ ಬ್ರಾಂಚ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
