Wednesday, 13th November 2019

Recent News

ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?

– ಮಿಡ್ ನೈಟ್ ಗ್ರಹಣ ಬುಡಮೇಲಾಗುತ್ತಾ ರಾಜ್ಯ ರಾಜಕಾರಣ!
– ರಾಜಕೀಯದಂಗಳದಲ್ಲೀಗ ‘ಚಂದ್ರ ಗ್ರಹಣ’ದ್ದೇ ಲೆಕ್ಕಾಚಾರ

ಬೆಂಗಳೂರು: ನಭೋಮಂಡಲದಲ್ಲಿ ಗೋಚರಿಸುವ ವಿಸ್ಮಯ ಖಗೋಳ ತಜ್ಞರ ಪಾಲಿಗೆ ಸೊಬಗು. ನೆರಳು ಬೆಳಕಿನ ಚಮತ್ಕಾರ. ಆದರೆ ಜನಸಾಮಾನ್ಯರ ಪಾಲಿಗೆ ಗ್ರಹಣ ‘ಗ್ರಹಚಾರ’ ಎನ್ನುವುದು ಜ್ಯೋತಿಷಿಗಳು ಹೇಳುವ ಭವಿಷ್ಯವಾಣಿ. ಅದರಲ್ಲೂ ಈ ಬಾರಿಯ ದೀರ್ಘ ಕಾಲದ ಪೌರ್ಣಿಮೆಯ ಗ್ರಹಣ ನಾನಾ ಪರಿಣಾಮ, ಗಂಡಾಂತರ ತಂದೊಡ್ಡಲಿದೆ ಎಂದಿರುವ ಜೋತಿಷಿಗಳ ಭವಿಷ್ಯ ಜನರನ್ನು ನಡುಗಿಸಿದೆ. ಕೇತುಗ್ರಸ್ಥ ಚಂದ್ರಗ್ರಹಣವಾದ ಕಾರಣ ರವಿಯ ಬೆಳಕು ಬೀಳದೇ ಚಂದ್ರ ದುರ್ಬಲನಾಗುತ್ತಾನೆ. ಅಮಾವಾಸ್ಯೆಯ ನಂತ್ರ ಪೌರ್ಣಮಿಯಲ್ಲಿ ಕಂಗೊಳಿಸುವ ಚಂದ್ರ ಮಂಕಾಗಾಲಿದ್ದಾನೆ. ಬೆರಗಿನಿಂದ ಪ್ರಕಾಶಮಾನವಾಗುವ ಚಂದ್ರನ ಶಕ್ತಿಯನ್ನು ಕೇತು ಮಂಕಾಗಿಸುವಾಗ, ಇದರ ಪರಿಣಾಮ ಎಲ್ಲರ ಮೇಲಾಗಲಿದೆಯಂತೆ. ಇದಕ್ಕಿಂತ ಮುಖ್ಯವಾಗಿ ಈ ಬಾರಿಯ ಗ್ರಹಣದ ವಕ್ರದೃಷ್ಟಿ ರಾಜ್ಯ ರಾಜಕೀಯದ ಮೇಲಾಗಲಿದೆ ಎಂಬ ಎಂಬ ಜ್ಯೋತಿಷಿಗಳ ಭವಿಷ್ಯವಾಣಿಯಿಂದ ರಾಜಕೀಯ ಮುಖಂಡರು ನಡುಗಿ ಹೋಗಿದ್ದಾರೆ. ಹೀಗಾಗಿ ಸದ್ಯ ರಾಜಕೀಯದಂಗಳದಲ್ಲೀಗ ಗ್ರಹಣ ಟೆನ್ಶನ್ ಶುರುವಾಗಿದೆ. ನಾವ್ಯಾವುದನ್ನೂ ನಂಬಲ್ಲ ಅಂತಿರೋರೆಲ್ಲಾ ಒಳಗೊಳಗೇ ಎಲ್ಲಾ ಲೆಕ್ಕಾಚಾರ ಹಾಕಲು ಶುರು ಮಾಡಿ, ನಮಗೆ ಕಂಟಕವೇನೂ ಆಗದಿರಲಿ ಎಂದು ದೇವರ ಮೊರೆ ಹೋಗಲು ಸಜ್ಜಾಗುತ್ತಿದ್ದಾರೆ.

ಜುಲೈ 27ರ ಗ್ರಹಣದಿಂದ ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬದಲಾವಣೆಯಾಗಲಿದೆ, ಚಂದ್ರನ ಕರಿಛಾಯೆ ಯಾರ ಮೇಲೆ ಬೀಳಲಿದೆ ಎನ್ನುವುದೇ ಈಗ ಸದ್ಯದ ಮಾತು. ವಿಚಿತ್ರ ಅಂದ್ರೆ ಈ ಬಾರಿಯ ಚಂದ್ರಗ್ರಹಣ ಕರ್ನಾಟಕ ರಾಜಕೀಯಕ್ಕೂ ತಟ್ಟುತ್ತಾ ಎಂಬ ಕುತೂಹಲವಿದೆ. ಚಂದ್ರಗ್ರಹಣದ ವಕ್ರದೃಷ್ಟಿ ಇಬ್ಬರು ಶತ್ರುಗಳಲ್ಲಿ ಒಬ್ಬರಿಗೆ ದುರದೃಷ್ಟವಾದ್ರೇ, ಇನ್ನೊಬ್ಬರಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎನ್ನುವುದು ರಾಜ್ಯದ ಜ್ಯೋತಿಷಿಗಳ ಲೆಕ್ಕಾಚಾರ.

ಮೈತ್ರಿ ಸರ್ಕಾರಕ್ಕೇನಾಗುತ್ತೆ?: ಮೊದಲೇ ತೊಯ್ದಾಟದಲ್ಲಿ ಸಿಲುಕಿದಂತಿರುವ ಸಮ್ಮಿಶ್ರ ಸರ್ಕಾರಕ್ಕೆ ಈ ಬಾರಿ ಗ್ರಹಣ ಗ್ರಹಚಾರದ ಎಫೆಕ್ಟ್ ಜೋರಾಗಿ ತಟ್ಟಲಿದೆಯಂತೆ. ಗಟ್ಟಿ ಭಾಂದವ್ಯವನ್ನೇ ಕೆಡವಿ ಹಾಕುವ ಕ್ಷುದ್ರ ಗ್ರಹಣಕ್ಕೆ ಡೋಲಾಯಮಾನ ಸ್ಥಿತಿಯಲ್ಲಿರುವ ಸರ್ಕಾರ ಯಾವ ಲೆಕ್ಕ, ಸೂರ್ಯ ಚಂದ್ರನನ್ನೇ ಬೆಂಬಿಡದೇ ಕಾಡುವ ಕೇತು ಅಧಿಕಾರದಲ್ಲಿರುವವರನ್ನು ಬೆಂಬಿಡದೇ ಕಾಡಲಿದ್ದಾನೆ ಅನ್ನೋದು ಜ್ಯೋತಿಷಿಗಳ ಮಾತು. ಅದೆಷ್ಟೇ ಒಗ್ಗಟ್ಟಿನಲ್ಲಿ ಹೋದರೂ ಗ್ರಹಣದ ಎಫೆಕ್ಟ್ ನಿಂದ ಜಗಳ, ಕಿರಿಕಿರಿ ನಿರಂತರವಾಗಿರುತ್ತೆ. ಆಡಳಿತ ಪಕ್ಷದಲ್ಲಿ ಸಮನ್ವಯ ಅನ್ನೋದು ಸಾಧ್ಯವಾಗೋದೆ ಇಲ್ವಂತೆ. ಒಳಜಗಳ, ಮಾನಸಿಕ ತೊಳಲಾಟ, ಕ್ಷೋಭೆಗಳಿಂದ ಸರ್ಕಾರದ ಬುಡ ಅಲುಗಾಡಲಿದೆ ಎನ್ನುವುದು ಬೆಂಗಳೂರಿನ ಗವಿಗಂಗಾಧರ ಕ್ಷೇತ್ರದ ಅರ್ಚಕರು ಹಾಗೂ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಅಭಿಪ್ರಾಯ.

ಚಂದ್ರಗ್ರಹಣಕ್ಕೆ ಬೆದರಿದ ರಾಜಾಹುಲಿ!: ಚಂದ್ರಗ್ರಹಣದ ಭೀತಿಗೆ ಬೆದರಿರುವ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗವಾಗಿ ಚಂದ್ರಗ್ರಹಣದ ಸಂದರ್ಭದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬೇಡಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಸೂಚನೆಯನ್ನು ಬಹಿರಂಗವಾಗಿಯೇ ಕೊಟ್ಟಿದ್ದಾರೆ. ಇದರ ಜೊತೆಗೆ ಗ್ರಹಣದಿಂದ ಜನರನ್ನು ಪಾರು ಮಾಡಲು ಪೂಜೆ ಪ್ರಾರ್ಥನೆಗಳನ್ನು ಮಾಡಿ ಅಂತಾ ಯಡಿಯೂರಪ್ಪ ಕರೆ ನೀಡಿದ್ದಾರೆ. ಅಷ್ಟೇ ಯಾಕೆ ಗ್ರಹಣದ ಭೀತಿಗೆ ರಾಜ್ಯ ಪ್ರವಾಸವನ್ನು ಕೂಡ ಮೊಟಕುಗೊಳಿಸಿರುವ ಯಡಿಯೂರಪ್ಪ, ಗ್ರಹಣಕ್ಕೆ ತಾನೆಷ್ಟು ಬೆದರಿದ್ದೇನೆ ಅನ್ನೋದನ್ನು ತೋರಿಸಿದ್ದಾರೆ. ಗ್ರಹಣದ ಬಳಿಕವಷ್ಟೇ ರಾಜ್ಯಪ್ರವಾಸ ನಡೆಸೋದಾಗಿ ಬಿಎಸ್‍ವೈ ಹೇಳಿದ್ದು ಈಗಾಗಲೇ ಗ್ರಹಣ ದೋಷ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

 

ದೇವೇಗೌಡರ ಕುಟುಂಬದಿಂದ ಪೂಜೆ: ದೇವೇಗೌಡ್ರ ಕುಟುಂಬಕ್ಕಂತೂ ಮೊದಲೇ ದೇವರು, ಜ್ಯೋತಿಷ್ಯ ಅಂತಾ ನಂಬಿಕೆ ಜಾಸ್ತಿ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಬಗ್ಗೆ ಭವಿಷ್ಯವಾಣಿಗಳು ಕೇಳಿ ಬರುತ್ತಿದ್ದಂತೆ ದೇವೇಗೌಡರ ಕುಟುಂಬ ಗ್ರಹಣ ದೋಷ ನಿವಾರಣೆಗಾಗಿ ಮಹಾ ಪೂಜೆ ನಡೆಸಲು ನಿರ್ಧರಿಸಿದ್ದಾರೆ. ಸುದೀರ್ಘ ಗ್ರಹಣ ಮುಗಿದ ಬೆಳಗಿನ ಜಾವ ಗ್ರಹಣ ದೋಷ ನಿವಾರಣೆಗಾಗಿ ಗವಿ ಗಂಗಾಧರ ದೇಗುಲದಲ್ಲಿ ಶಿವಾರಾಧನೆ, ಹೋಮ, ಯಜ್ಞ ಯಾಗಗಳನ್ನು ನಡೆಸಲಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.

ಪ್ರಧಾನಿ ಮೋದಿಗೂ ಕಾಡಲಿದ್ಯಾ ಗ್ರಹಣ ಕಂಟಕ!: ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ಪ್ರಧಾನಿ ಮೋದಿಗೂ ಗ್ರಹಣ ಕಂಟಕದ ಕರಿನೆರಳ ಛಾಯೆ ಬೀಳಲಿದೆ ಎಂದು ಮಗದೊಂದು ಬೆಚ್ಚಿಬೀಳಿಸುವ ಭವಿಷ್ಯವನ್ನು ಜ್ಯೋತಿಷಿಗಳು ನುಡಿದಿದ್ದಾರೆ. ಈ ಹಿಂದೆ ರಕ್ತ ಚಂದ್ರ ಗ್ರಹಣದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಹಿಂಸಾಚಾರ ಹೆಚ್ಚಾಗಿ ಕೇಂದ್ರಕ್ಕೆ ತಲೆನೋವಾಗಿತ್ತು. ಈ ಬಾರಿಯೂ ಇಂತಹ ಅನಿರೀಕ್ಷಿತ ತೊಂದರೆಗಳು ಎದುರಾಗಲಿದೆಯಂತೆ. ದೇಶಕ್ಕೆ ಜಲಪ್ರಳಯ, ಕಂಟಕ ಕಾಡಲಿದ್ದು ಸರ್ಕಾರದ ನೆಮ್ಮದಿ ಕಸಿದುಕೊಳ್ಳಲಿದೆ. ಮುಂಬರುವ ಲೋಕಸಭಾ ಚುನಾವಣಾ ಕದನದ ದಿಕ್ಕನ್ನೇ ಬದಲಿಸುತ್ತಾ ಅನ್ನೋ ವಿಶ್ಲೇಷಣೆ ಕೂಡಿ ಕೇಳಿ ಬರುತ್ತಿದೆ.

ರಾಜಕೀಯ ಅಖಾಡದ ಶತ್ರುಗಳಿಗೆ ಲಾಭ – ನಷ್ಟದ ಗ್ರಹಣ!: ಇವೆಲ್ಲದರ ಮಧ್ಯೆ ಕುತೂಹಲ ಮೂಡಿಸಿದ್ದು ಅಂದ್ರೆ ರಾಜಕೀಯ ಅಖಾಡದ ಇಬ್ಬರೂ ಘಟಾನುಘಟಿಗಳಲ್ಲಿ ಒಬ್ಬರಿಗೆ ಗ್ರಹಣ ಅದೃಷ್ಟದ ಬಾಗಿಲು ತೆರೆಯುತ್ತದಂತೆ. ಇನ್ನೊಬ್ಬರಿಗೆ ಎರಡು ದೋಣಿಯ ಪಯಣದ ಅಸಲಿ ಸಂಕಷ್ಟ ಶುರುವಾಗಲಿದೆ ಅನ್ನೋ ಭವಿಷ್ಯಗಳು ಕೇಳಿದೆ. ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಈ ರಾಶಿಯವರಿಗೆ ಗ್ರಹಣದ ನಂತರ ಅದೃಷ್ಟ ಖುಲಾಯಿಸಲಿದೆ ಎಂಬ ಲೆಕ್ಕಾಚಾರವನ್ನು ಕೆಲ ಜ್ಯೋತಿಷಿಗಳು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಹೊಸ ಟ್ವಿಸ್ಟ್ ಮೂಡಿಸಬಹುದಾ ಎಂಬ ಅನುಮಾನವೂ ಇದೆ. ಅದೃಷ್ಟ – ನತದೃಷ್ಟ, ಲಾಭ ನಷ್ಟ, ಹೀಗೆ ಜುಲೈ 27 ರ ಚಂದಮಾಮನ ಗ್ರಹಣದ ಒಳಿತು ಕೆಡುಕುಗಳ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

Leave a Reply

Your email address will not be published. Required fields are marked *