Connect with us

Districts

ಕೊಡಗಿನಲ್ಲಿ 22ರವರೆಗೆ ಭಾರೀ ಮಳೆ ಸಾಧ್ಯತೆ- ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ

Published

on

ಕೊಡಗು/ ರಾಯಚೂರು: ಜಿಲ್ಲೆಯಲ್ಲಿ ಗುರುವಾರದಿಂದ ಜುಲೈ 22ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಜಿಲ್ಲೆಯಾದ್ಯಂತ 5 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸದ್ಯ ರಾಜ್ಯದ ಬಹುತೇಕ ಕಡೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೊಡಗಿನಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ. ಆದ್ರೆ ಜುಲೈ 22ರವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮನವಿ ಮಾಡಿದೆ.

ಬಿಸಿಲುನಾಡು ರಾಯಚೂರಿನಲ್ಲಿ ಕೂಡ ಮಳೆ ಆರಂಭವಾಗಿದ್ದು, ಮಳೆ ಇಲ್ಲದೆ ಕೆಂಗೆಟ್ಟಿದ್ದ ಜನರಿಗೆ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆಯಿಲ್ಲದೆ ಬಿತ್ತನೆ ಮಾಡದೇ ರೈತರು ಕಂಗಾಲಾಗಿ ಕುಳಿತಿದ್ದರು. ಸದ್ಯ ಉತ್ತಮ ಮಳೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭಕ್ಕೆ ಸಿದ್ದತೆ ನಡೆಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಇನ್ನೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಹಾಗೆಯೇ ಕರ್ನಾಟಕ ಕರಾವಳಿ ಮತ್ತು ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಒಂದೆಡೆ ಮುಂಗಾರು ಕೊರತೆ ಎದುರಿಸುತ್ತಿರುವ ಕೇರಳದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಪ್ರಮುಖವಾಗಿ 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಮುಂದುವರೆದಿದ್ದು, ಅಸ್ಸಾಂ ಮತ್ತು ಬಿಹಾರದಲ್ಲಿ ಒಟ್ಟು ಈವರೆಗೆ 55 ಮಂದಿ ಮೃತಪಟ್ಟಿದ್ದಾರೆ.

ಅಸ್ಸಾಂನ 33ರಲ್ಲಿ 31 ಜಿಲ್ಲೆಗಳಲ್ಲಿ ಪ್ರವಾಹ ವ್ಯಾಪಿಸಿದ್ದು, 43 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಘಾಲಯ, ಮಣಿಪುರ, ಮಿಜೋರಾಂನಲ್ಲಿಯೂ ಪ್ರವಾಹ ಸ್ಥಿತಿ ಉಂಟಾಗಿದೆ. ದೆಹಲಿ, ಹರಿಯಾಣದಲ್ಲೂ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದೇಶದ ಉತ್ತರ ಭಾಗದಲ್ಲಿಯೂ ಮಳೆರಾಯನ ಅಬ್ಬರ ಮುಂದುವರಿದಿದ್ದು, ಹಲವೆಡೆ ಪ್ರವಾಹ ಸೃಷ್ಟಿಯಾಗಿದೆ.