Connect with us

Chamarajanagar

ಸಿಎಂ ಭೇಟಿಗಾಗಿ 80 ಕಿ.ಮೀ. ಪಾದಯಾತ್ರೆಯ ಮಾಡಲು ರೈತರ ನಿರ್ಧಾರ

Published

on

ಚಾಮರಾಜನಗರ: ಜಿಲ್ಲೆಯ ನೂರಾರು ರೈತರು ನವೆಂಬರ್ 24ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಕೊಳ್ಳೇಗಾಲ ತಾಲೂಕು ಕುಂತೂರಿನಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ.

ನವೆಂಬರ್ 25 ಹಾಗೂ 26ರಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಕಬ್ಬುಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯ ಮಾಡಲು ರೈತರು ತೀರ್ಮಾನಿಸಿದ್ದಾರೆ.

ನವೆಂಬರ್ 24ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲದಿಂದ ಹೊರಟು 80 ಕಿಲೋ ಮೀಟರ್ ದೂರದಲ್ಲಿರುವ ಮಲೆಮಹದೇಶ್ವರ ಬೆಟ್ಟವನ್ನು ನವೆಂಬರ್ 25ರಂದು ಸಂಜೆ ವೇಳೆಗೆ ತಲುಪಿ, ಅಂದು ಅಥವಾ ಮಾರನೇ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.

ಕುಂತೂರು ಬಣ್ಣಾರಿ ಸಕ್ಕರೆ ಕಾರ್ಖಾನೆ ಒಪ್ಪಿಗೆಯಾಗಿರುವ ಕಬ್ಬನ್ನು 16-17 ತಿಂಗಳಾದರೂ ಕಟಾವು ಮಾಡುತ್ತಿಲ್ಲ. ಇದರಿಂದ ಕಬ್ಬು ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಕಬ್ಬನ್ನು 12 ತಿಂಗಳ ಒಳಗೆ ಕಟಾವು ಮಾಡಬೇಕು. ಕಳೆದ ವರ್ಷದ ಇಳುವರಿ ಆಧಾರದ ಮೇಲಿನ ದರದಂತೆ ರೈತರಿಗೆ 12 ಕೋಟಿ 95 ಲಕ್ಷ ರೂಪಾಯಿ ಬಾಕಿಯನ್ನು ಇನ್ನೂ ಪಾವತಿಸಿಲ್ಲ ಎಂಬುದು ರೈತರ ಆರೋಪಿಸಿದ್ದಾರೆ.

ರಂಗರಾಜನ್ ವರದಿ ಪ್ರಕಾರ ಸಕ್ಕರೆ ಕಾರ್ಖಾನೆಯ ಉಪಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಶೇಕಡಾ 70ರಷ್ಟು ಹಾಗೂ ಸಕ್ಕರೆ ಕಾರ್ಖಾನೆಗೆ ಶೇಕಡಾ 30ರಷ್ಟು ಲಾಭಾಂಶ ಹಂಚಿಕೆಯಾಗಬೇಕು. ಮೊಲಾಸೆಸ್, ಫ್ರೆಷ್ ಮಡ್, ಕೋ ಜನರೇಷನ್ ಮೂಲಕ ಉತ್ಪಾದಿಸುವ ವಿದ್ಯುತ್ ನಿಂದ ಬರುವ ಲಾಭಾಂಶವನ್ನು ರೈತರಿಗೆ ನೀಡದೆ ವಂಚಿಸಲಾಗುತ್ತಿದೆ ಎಂದು ರೈತ ಮುಖಂಡ ನಂಜುಂಡಸ್ವಾಮಿ ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in