Monday, 25th March 2019

ಯಜಮಾನ ಗಳಿಕೆ ಎಷ್ಟು ಎಂದು ಕೇಳಿದ್ದಕ್ಕೆ ದರ್ಶನ್ ಗರಂ

ಮೈಸೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿದ್ದಾರೆ. ಯಜಮಾನ ಚಿತ್ರದ ಗಳಿಕೆ ಎಷ್ಟಾಗಿದೆ ಎಂಬ ಪ್ರಶ್ನೆಯೇ ದರ್ಶನ್ ಕಣ್ಣು ಕೆಂಪಾಗುವಂತೆ ಮಾಡಿತ್ತು.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಟ ದರ್ಶನ್, ಸಿನಿಮಾ ಯಶಸ್ವಿನ ಬಗ್ಗೆ ಸಂತಸ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪರೀಕ್ಷೆ, ಜನರಿಗೆ ಕ್ರಿಕೆಟ್ ಪಂದ್ಯ ಇದ್ದರೂ ಸಿನಿಮಾ ಸಕ್ಸಸ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ರಾಜಕೀಯ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ದರ್ಶನ್, ಇದು ಕೇವಲ ಯಜಮಾನ ಚಿತ್ರದ ಸುದ್ದಿಗೋಷ್ಠಿ. ಸಿನಿಮಾ ಬಗ್ಗೆ ಏನಾದರೂ ಕೇಳಿ ಹೇಳುತ್ತೇನೆ. ಇಲ್ಲಿಗೆ ಬಂದಿರೋದು ನಾನು ಯಜಮಾನನಾಗಿ, ಬೇರೆ ವಿಚಾರಗಳನ್ನು ಬೇರೆ ಕಡೆ ನಾನು ಮಾತನಾಡುತ್ತೇನೆ ಎಂದರು.

ಇತ್ತ ಮಾಧ್ಯಮಗಳಿಂದ ಸಿನಿಮಾ ಕಲೆಕ್ಷನ್ ಎಷ್ಟು ಎಂಬ ಪ್ರಶ್ನೆ ಕೇಳಿ ಬರುತ್ತಿದಂತೆ ಗರಂ ಆದ ದರ್ಶನ್, ಸಿನಿಮಾ ಕಲೆಕ್ಷನ್ ಬಗ್ಗೆ ಕಟ್ಟಿಕೊಂಡ ಏನ್ ಮಾಡ್ತಿರಾ? ನಿಮಗೆ ಅದರಿಂದ ಉಪಯೋಗ ಆಗುವುದಾದರೆ ಹೇಳಿ ಪೂರ್ತಿ ದಾಖಲೆ ಕೊಡುತ್ತೇನೆ. ಅಷ್ಟೂ ಬೇಕೆಂದರೆ ನೀವೇ ಎಷ್ಟು ಥಿಯೇಟರ್ ಗಳಲ್ಲಿ ಚಿತ್ರ ಇದೆ. ಒಂದು ಶೋಗೆ ಎಷ್ಟು ಕಲೆಕ್ಷನ್ ಆಗುತ್ತೆ. ಹಾಗೇ ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಿ ಎಂದು ಸಿಡಿಮಿಡಿಗೊಂಡರು.

ಚಿತ್ರವೊಂದಕ್ಕೆ 19 ಕೋಟಿ ರೂ. ಸಂಭಾವನೆ ಆಫರ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾರು ಸರ್. ನಿಮಗೆ ಹೇಳಿದ್ದು? ಅವರನ್ನು ನಾಳೆಯೇ ಕರೆದುಕೊಂಡು ಬನ್ನಿ ಸಿನಿಮಾ ಮಾಡುತ್ತೀನಿ. ನೀವು ಹೀಗೆ ಹೇಳಿ ಹೇಳಿ ಐಟಿಯವರು ನಮ್ಮಲ್ಲಿ ಲೆಕ್ಕ ಕೇಳುತ್ತಾರೆ. ಅವರಿಗೆ ಕನ್ನಡ ಭಾಷೆ ಬರುವುದಿಲ್ಲ. ‘ದರ್ಶನ್ ತುಮಾರ ಪಾಸ್ ಇತ್ನಾ ಪೈಸಾಯೇ’ ಎಂದು ಕೇಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *