Connect with us

Bengaluru City

ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

Published

on

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಈಗ ಗಾಂಧಿ ನಗರದಲ್ಲಿ ಸಖತ್ ಚರ್ಚೆ ಆಗುತ್ತಿದ್ದು ಇಂದು ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ನವ ನಟ ಧ್ರುವನ್ ಹಾಗೂ ಪ್ರಿಯಾ ವಾರಿಯರ್ ನಟನೆ ಇನ್ನೂ ಹೆಸರಿಡದ ಸಿನಿಮಾ ಪೂಜೆಗೆ ಇವರಿಬ್ಬರೂ ಒಟ್ಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಣ್ಣ, ಒಳ್ಳೆ ಕಥೆ ಸಿಕ್ಕರೆ ಖಂಡಿತಾ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.

ನಾನು ದರ್ಶನ್ ಯಾವಗಲೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇವೆ. ಸಿನಿಮಾ ಮಾಡಿದರೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು. ಆ ರೀತಿಯ ಕಥೆ ಬಂದರೆ ಖಂಡಿತಾ ಇಬ್ಬರು ಒಟ್ಟಿಗೆ ಮಾಡುತ್ತೇವೆ ಎಂದು ಹೇಳಿದರು.

ಈ ವೇಳೆ ಶಿವಣ್ಣನ ಜೊತೆಯಲ್ಲೇ ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಶಿವಣ್ಣ ಸೀನಿಯರ್ ಅವರು ಲಾಂಗ್ ಹಿಡಿದರೆ ಮುಂದೆ ನಿಂತರೆ ನಾನು ಅವರ ಹಿಂದೆ ನಿಲ್ಲುತ್ತೇನೆ. ಇನ್ನೊಂದು ಹೇಳಬೇಕು ಎಂದರೆ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡೋ ಡೈರೆಕ್ಟರ್ ಯಾರೂ ಇಲ್ಲ. ಈ ರೀತಿಯ ಡೈರೆಕ್ಟರ್ ಇದ್ದರೆ ಅವರು ಕಥೆ ಮಾಡಿಕೊಂಡು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ಸ್‍ ಗಳ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿವಣ್ಣ, ಈ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಮಫ್ತಿ ಸಿನಿಮಾದಲ್ಲಿ ನಟಿಸಿದ್ದರು. ನಂತರ ಜೋಗಿ ಪ್ರೇಮ್ ನಿರ್ದೇಶನ ದಿ ವಿಲನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದರು.

ದರ್ಶನ್ ಕೂಡ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಈ ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.