Latest
ರೈತರು, ಕೇಂದ್ರ ಸರ್ಕಾರವನ್ನು ಒಳಗೊಂಡ ಸಮಿತಿ ರಚಿಸಿ – ಸುಪ್ರೀಂ

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರವನ್ನು ಒಳಗೊಂಡ ಸಮಿತಿಯನ್ನು ರಚಿಸಿ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ್ಯಗೊಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.
ಪ್ರತಿಭಟನಾ ನಿರತ ರೈತರನ್ನು ಹೆದ್ದಾರಿಗಳಿಂದ ಕಳುಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಮುಖ್ಯನ್ಯಾಯಾಧೀಶ ಎಸ್.ಎ.ಬೊಬ್ಡೆ ನೇತೃತ್ವದ ಪೀಠದಲ್ಲಿ ನಡೆಯಿತು.
ಈ ವೇಳೆ ರೈತ ಸಂಘಟನೆಗಳು ಮತ್ತು ಈ ಪ್ರತಿಭಟನೆಗೆ ಸಂಬಂಧಿಸಿದವರನ್ನು ಒಳಗೊಂಡ ಸಮಿತಿ ರಚನೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇದು ರಾಷ್ಟ್ರೀಯ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಇದು ಕೇವಲ ಸರ್ಕಾರ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗುವಂತೆ ಕಾಣಿಸುತ್ತಿಲ್ಲ ಎಂದು ನ್ಯಾ. ಬೊಬ್ಡೆ ಅಭಿಪ್ರಾಯಪಟ್ಟರು.
ರೈತರು ಮತ್ತು ಸರ್ಕಾರ ನಡುವಿನ ಮಾತುಕತೆ ಅಂತಿಮ ಹಂತಕ್ಕೆ ಬಂದಿಲ್ಲ. ಯಾವುದೇ ಒಮ್ಮತದ ನಿರ್ಣಯಕ್ಕೂ ಇದುವರೆಗೂ ಬರಲಾಗಿಲ್ಲ ಎಂದು ಕೇಂದ್ರದ ಪರ ಹಾಜರಾದ ತುಷಾರ್ ಮೆಹ್ತಾ ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂಬಂಧ ಸುಪ್ರೀಂಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಉತ್ತರ ಕೇಳಿದೆ. ಅರ್ಜಿ ಸಂಬಂಧ ರೈತರಿಗೂ ತಮ್ಮ ವಾದ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ನಾಳೆ ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ.
ರೈತರ ಧರಣಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಹಲವು ಪಿಐಎಲ್ ಗಳು ಸಲ್ಲಿಕೆಯಾಗಿವೆ. ರೈತರ ಪ್ರತಿಭಟನೆಯಿಂದ ದೇಶದ ರಾಜಧಾನಿ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ತಡೆ ನಿಯನಗಳನ್ನ ಪಾಲಿಸುತ್ತಿಲ್ಲ. ಇದರಿಂದ ಕೊರೊನಾ ಸ್ಫೋಟವಾಗುವ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ
