Connect with us

Corona

ಲಸಿಕೆ ಅಭಿಯಾನದಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ತಾರತಮ್ಯವಾಗುತ್ತಿದೆ-ಹೆಚ್.ಡಿ ಕುಮಾರಸ್ವಾಮಿ

Published

on

Share this

ಹಾಸನ: 18 ವರ್ಷದ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಸರ್ಕಾರ ಹಿನ್ನಡೆ ಅನುಭವಿಸಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

18-44 ವಯೋಮಾನದವರಿಗೆ ಲಸಿಕೆ ಹಾಕುವ ಅಭಿಯಾನ ಮೇ 1ರಿಂದ ಆರಂಭವಾಗಿದೆ. ದೇಶದಲ್ಲಿ ಮಂಗಳವಾರದ ಹೊತ್ತಿಗೆ 6 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಗುಜರಾತ್‍ನಲ್ಲಿ 1,61,000 ಜನರಿಗೆ ಲಸಿಕೆ ಹಾಕಲಾಗಿದ್ದರೆ, ಕರ್ನಾಟಕದಲ್ಲಿ ಕೇವಲ 3475 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದು ಕೇಂದ್ರದ ತಾರತಮ್ಯವೋ ಅಥವಾ ರಾಜ್ಯದ ವೈಫಲ್ಯವೋ ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಆಗುತ್ತಿರುವ ಈ ತಾರತಮ್ಯ ಮನುಷ್ಯತ್ವ ವಿರೋಧಿ. ರಾಜ್ಯಕ್ಕೆ ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿಲ್ಲವೇ? ರಾಜ್ಯಕ್ಕೆ ಏನು ಬೇಕೋ ಅದನ್ನು ಕೇಳಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲವೇ? ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರಶ್ನಿಸಲು ನಮ್ಮವರಿಗೆ ಬಾಯಿಲ್ಲವೇ? ರಾಜ್ಯದ ಬಿಜೆಪಿ ಸರ್ಕಾರ, ಸಂಸದರು ಮೊದಲು ಈ ತಾರತಮ್ಯದ ವಿರುದ್ಧ ಹೋರಾಡಬೇಕು. ಜನರ ಜೀವ ಉಳಿಸಲು ಬೇಕಾಗಿರುವುದನ್ನು ಕೇಂದ್ರದಿಂದ ಕೇಳಿ ಪಡೆದುಕೊಳ್ಳಬೇಕಾದದ್ದು ಈ ಹೊತ್ತಿನ ಅಗತ್ಯ. ಲಸಿಕೆ ಅಭಿಯಾನದಲ್ಲಿ ಆಗುತ್ತಿರುವ ಈ ತಾರತಮ್ಯ, ವೈಫಲ್ಯಗಳನ್ನು ರಾಜ್ಯದ ಜನರೂ ಪ್ರಶ್ನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಪಾಯದ ದಿನಗಳು ಮುಂದಿವೆ ಎಂದು ಟ್ವೀಟ್ ಮಾಡಿದ್ದಾರೆ.

ಹಿರಿಯ ಚಿತ್ರ ನಿರ್ದೇಶಕ ರೇಣುಕಾಶರ್ಮ ಹೆಚ್‍ಡಿಕೆ ಸಂತಾಪ

ಹಿರಿಯ ಚಿತ್ರ ನಿರ್ದೇಶಕ ರೇಣುಕಾಶರ್ಮ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕೋವಿಡ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಜೀವ ತೆತ್ತಿರುವುದು ಅತ್ಯಂತ ನೋವಿನ ಸಂಗತಿ. ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಅವರ ಅತ್ಯಂತ ಯಶಸ್ವಿ ಚಿತ್ರವಾಗಿತ್ತು. ನಮ್ಮೂರ ದೇವತೆ, ಶಹಬ್ಬಾಸ್ ವಿಕ್ರಮ್, ಅಂಜದ ಗಂಡು, ಶಬರಿಮಲೈ ಅಯ್ಯಪ್ಪ, ಶ್ರೀ ಅಯ್ಯಪ್ಪ, ಭರ್ಜರಿ ಗಂಡು, ಕಿಂದರಿ ಜೋಗಿ, ಕೊಲ್ಲಾಪುರ ಶ್ರೀ ಮೂಕಾಂಬಿಕೆ, ಮಹಾಸಾದ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಅವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement