Connect with us

Bengaluru City

ಜಾರಕಿಹೊಳಿ ಸಿಡಿ ಪ್ರಕರಣ – ಸಂತ್ರಸ್ತೆ ಪೋಷಕರ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Published

on

Share this

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತ ಯುವತಿ ಸಿಆರ್ ಪಿಸಿ 164 ಅಡಿ ನೀಡಿರುವ ಸ್ವಇಚ್ಛಾ ಹೇಳಿಕೆಯನ್ನ ರದ್ದು ಮಾಡಬೇಕು ಅಂತಾ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.

ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ ನೀಡಿದ್ದ ಕಲಂ 164ರ ಅಡಿಯಲ್ಲಿ ಹೇಳಿಕೆಯನ್ನು ಹಾಗೂ ಅದರ ನ್ಯಾಯಬದ್ಧತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಸಂತ್ರಸ್ತೆಯ ಪೋಷಕರು ಪ್ರಶ್ನಿಸಿದ್ರು. ಸಂತ್ರಸ್ತೆಯ ಹೇಳಿಕೆ ಅವಳ ಮನಸ್ಸಿಗೆ ವಿರುದ್ಧವಾಗಿ ಹಾಗೂ ಒತ್ತಾಯ ಪೂರ್ವಕವಾಗಿ ಪಡೆಯಲಾಗಿದೆ ಎಂದು ಆರೋಪಿಸಿದ್ದರು. ಕಲಂ 164 ಅಡಿಯಲ್ಲಿ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಪಡೆಯುವಾಗ ಸಂತ್ರಸ್ತೆಯ ಮನಸ್ಥಿತಿ ಸರಿ ಇರಲಿಲ್ಲ ಹಾಗೂ ಮಾನಸಿಕ ಒತ್ತಡದಲ್ಲಿದ್ದಳು ಎಂದು ಪೋಷಕರು ವಾದಿಸಿದ್ದರು.

ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಈ ರಿಟ್ ಅರ್ಜಿಯಲ್ಲಿ ಸಂತ್ರಸ್ತೆಯ ಪರವಾಗಿ ತಮ್ಮ ವಾದವನ್ನೂ ಆಲಿಸಬೇಕೆಂದು ಸುಪ್ರೀಂಕೋರ್ಟ್ ವಕೀಲರಾದ ಸಂಕೇತ್ ಏಣಗಿ ಅರ್ಜಿ ಸಲ್ಲಿಸಿದ್ದರು. ವಕೀಲ ಸಂಕೇತ್ ಏಣಗಿ ಅವರ ವಾದ ಆಲಿಸಿದ ನ್ಯಾಯಾಲಯ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ ನೀಡಿದ್ದ ಕಲಂ 164 ಸಿಆರ್ ಪಿಸಿ ಅಡಿಯಲ್ಲಿ ಹೇಳಿಕೆ ನ್ಯಾಯಬದ್ಧವಾಗಿದ್ದು, ಸುಪ್ರೀಂಕೋರ್ಟಿನ ನಿರ್ಭಯ ಅತ್ಯಾಚಾರ ಪ್ರಕರಣದ ತೀರ್ಪಿನ ಅನುಸಾರವಾಗಿದೆ. ತದನಂತರ ಹೊಸದಾಗಿ 2013ರಲ್ಲಿ ಕಲಂ 164 ಅಡಿ ತಿದ್ದುಪಡಿಯಾಗಿ ಸೇರ್ಪಡೆಯಾದ ಹೊಸ ಕಲಂ 164(5) & (5ಂ) ಸಿಆರ್ ಪಿಸಿ ಅಡಿಯಲ್ಲಿ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ ಸ್ವಇಚ್ಛೆಯಿಂದ ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ನೀಡಿದ್ದು ಅದು ನ್ಯಾಯಬದ್ಧವಾಗಿದೆ ಎಂದು ವಾದ ಮಂಡಿಸಿದ್ರು.  ಇದನ್ನೂ ಓದಿ: ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ರು. ವಾದ ಪ್ರತಿವಾದ ಆಲಿಸಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ, ಸಂತ್ರಸ್ತೆಯು 2013ರಲ್ಲಿ ಕಲಂ 164 ಸಿಆರ್ ಪಿಸಿಯ ತಿದ್ದುಪಡಿಯಾಗಿ ಸೇರ್ಪಡೆಯಾದ ಹೊಸ ಕಲಂ 164(5) & (5ಂ) ಅಡಿ ಸಿಆರ್ ಪಿಸಿಯರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರಿಗೆ ಸ್ವಇಚ್ಛೆಯಿಂದ ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ನೀಡಿದ್ದು, ಅದು ನ್ಯಾಯಬದ್ಧವಾಗಿದೆ ಎಂದು ಮಹತ್ವದ ತೀರ್ಪು ನೀಡಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು. ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

ಹೇಬಿಯಸ್ ಕಾರ್ಪಸ್ ಅರ್ಜಿ ಸಹ ವಜಾ:
ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಮಹಾನಾಯಕ ಗಾಂ…ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡ್ತೇನೆ- ರಮೇಶ್ ಜಾರಕಿಹೊಳಿ ಆಕ್ರೋಶ

ಒಪ್ಪಿತ ಲೈಂಗಿಕ ಕ್ರಿಯೆನಾ?:
ಪ್ರಕರಣದ ಆರಂಭದಲ್ಲಿ ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

Advertisement