Tuesday, 10th December 2019

Recent News

ಆರೋಪಿಗಳ ಬೆನ್ನತ್ತಿದ ಸಿಸಿಬಿ – ಲಕ್ಷ್ಮಣನ ಹತ್ಯೆಗೆ ಸಂಬಂಧಿಸಿದಂತೆ ಇನ್ನೊಬ್ಬನ ಮೇಲೆ ಫೈರಿಂಗ್

ಬೆಂಗಳೂರು: ರೌಡಿ ಲಕ್ಷ್ಮಣ ಹತ್ಯೆ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿನಕ್ಕೊಬ್ಬ ಆರೋಪಿಗೆ ಗುಂಡೇಟು ನೀಡಿ ಬಂಧಿಸುತ್ತಿದ್ದಾರೆ. ನಿನ್ನೆಯಷ್ಟೇ ಹೇಮಿಯನ್ನು ಬಂಧಿಸಿದ ಪೊಲೀಸರು ಇಂದು ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ.

ಆರೋಪಿ ಆಕಾಶ್ ಅಲಿಯಾಸ್ ಮಾಮನ ಕಾಲಿಗೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇಂದು ಮುಂಜಾನೆ ಸುಮಾರು 5 ಗಂಟೆಗೆ ಉತ್ತರಹಳ್ಳಿಯ ನಿರ್ಜನ ಪ್ರದೇಶದಲ್ಲಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆರೋಪಿ ಮಾಮನನ್ನು ಬಂಧಿಸಲು ಸಿಸಿಬಿ ಪೊಲೀಸರು ಹೋಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಆಗ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮುರುಗೇಂದ್ರಯ್ಯ ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

ಸಿಸಿಬಿ ಇನ್ಸ್ ಪೆಕ್ಟರ್ ಮುರುಗೇಂದ್ರಯ್ಯ, ಪೊಲೀಸ್ ಪೇದೆಗಳಾದ ಅರುಣ್, ಶಾಂತರಾಜು ಮತ್ತು ಸತೀಶ್ ಆರೋಪಿಗಳ ಬಂಧನದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಪೇದೆ ಅರುಣ್ ಕುಮಾರ್ ಮತ್ತು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ರೌಡಿ ಲಕ್ಷ್ಮಣ ಕೊಲೆ ಪ್ರಕರಣ- ಮೊತ್ತೊಬ್ಬ ರೌಡಿ ಕಾಲಿಗೆ ಗುಂಡು

ಮಂಗಳವಾರ ಲಕ್ಷ್ಮಣ್ ಹತ್ಯೆ ಪ್ರಕರಣದ 6 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೇ ಕೇಸಿನ ಪ್ರಮುಖ ಆರೋಪಿ ರೌಡಿ ಆಕಾಶ್ ಭಾಗಿಯಾಗಿರುವ ಮಾಹಿತಿ ಸಿಕ್ಕಿತ್ತು. ಮಂಗಳವಾರ ತಡರಾತ್ರಿ ರೌಡಿ ಆಕಾಶ್ ಉತ್ತರಹಳ್ಳಿಯ ಪೂರ್ಣಪ್ರಜ್ಞ ನಗರದಲ್ಲಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಲು ಹೋದಾಗ ಪೆಪ್ಪರ್ ಸ್ಪ್ರೇ ಹೊಡೆದು ಮುಖ್ಯಪೇದೆ ಅರುಣ್ ಮೇಲೆ ಹಲ್ಲೆ ಮಾಡಿದ್ದನು. ಆಗ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮುರುಗೇಂದ್ರಯ್ಯ ಫೈರ್ ಮಾಡಿದ್ದಾರೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ಹೇಳಿದ್ದಾರೆ.

ಹತ್ಯೆಯಾದ ಲಕ್ಷ್ಮಣ್‍ಗೆ ಮಚ್ಚಿನಿಂದ ಹೊಡೆದಿರುವವರ ಪೈಕಿ ಈ ರೌಡಿ ಆಕಾಶ್ ಕೂಡ ಭಾಗಿಯಾಗಿದ್ದ. ಕ್ಯಾಟ್ ರಾಜ ಹಾಗೂ ಹೇಮಿ ಟೀಂನಲ್ಲಿ ರೌಡಿ ಆಕಾಶ್ ಗುರುತಿಸಿಕೊಂಡಿದ್ದನು. ಸದ್ಯ ಬಂಧಿತರಾಗಿರುವ ಎಲ್ಲಾ ಆರೋಪಿಗಳು ವಿಚಾರಣೆ ವೇಳೆ ಲಕ್ಷ್ಮಣ್ ಹತ್ಯೆ ಕೇಸಿನಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಳ್ಳುತ್ತಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *