Cinema
ಡ್ರಗ್ಸ್ ಕೇಸ್ – ಇಂದ್ರಜಿತ್ ಲಂಕೇಶ್ಗೆ ಸಿಸಿಬಿ ನೋಟಿಸ್

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ.
ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ಅವರು ನೋಟಿಸ್ ನೀಡಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈಗಾಗಲೇ ಎರಡು ಬಾರಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಕಿಂಗ್ಪಿನ್ ಅನಿಕಾ ಬಂಧನ ಮತ್ತು ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸದ್ದು ಮಾಡಿದ ವೇಳೆ ಚಂದನವನದಲ್ಲಿ ಇದರ ನಶೆ ಇದೆ. ಪೊಲೀಸರು ತನಿಖೆ ನಡೆಸುವ ಅಗತ್ಯವಿದೆ. ತಮಗೆ ಸೂಕ್ತ ಭದ್ರತೆ ನೀಡಿದ್ರೆ ಪೊಲೀಸರಿಗೆ ತಮ್ಮ ಬಳಿಯಲ್ಲಿರುವ ಮಾಹಿತಿಯನ್ನ ನೀಡುವುದಾಗಿ ಇಂದ್ರಜಿತ್ ಲಂಕೇಶ್ ಹೇಳಿದ್ದರು. ಇಂದ್ರಜಿತ್ ಹೇಳಿಕೆ ಬೆನ್ನಲ್ಲೇ ಸಿಸಿಬಿ ಎರಡು ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಇದೀಗ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಇಂದ್ರಜಿತ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
