Connect with us

Bengaluru City

ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

Published

on

– ಪಾರ್ಟಿಗೆ ಹೋಗೋ ಅಭ್ಯಾಸವೇ ಇಲ್ಲ
– ಪುಣ್ಯ ಮಾಡಿದ್ರಿಂದ ಭೂಮಿ ಸಂಪಾದಿಸಿದ್ದೇನೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ, ಖ್ಯಾತ ನಿರೂಪ್ ಅಕುಲ್ ಬಾಲಾಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಈ ಸಂಬಂಧ ಅಕುಲ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ನನಗೆ ವಾಟ್ಸಪ್ ಮೂಲಕ ಸಿಸಿಬಿ ಅಧಿಕಾರಿಳು ಮೆಸೇಜ್ ಕಳುಹಿಸಿ ನಾಳೆ ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಹಾಗೆಯೇ ವಿಚಾರಣೆಗೆ ನಾಳೆ ಹಾಜರಾಗುವುದಾಗಿ ತಿಳಿಸಿದರು.

ನಾನು ಪಾರ್ಟಿಗಳಿಗೆ ಹೋಗಲ್ಲ. ಹೀಗಾಗಿ ಈ ನೋಟಿಸ್‍ನಿಂದ ನನಗೂ ಶಾಕ್ ಆಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ವೀರೇನ್ ಖನ್ನಾ ನನಗೆ ಗೊತ್ತಿಲ್ಲ. ಅವರ ಪಾರ್ಟಿಗಳಿಗೆ ನಾನು ಹೋಗಿಲ್ಲ. ನ್ಯೂಸ್ ಚಾನೆಲ್ ಗಳ ಮೂಲಕವೇ ಅವರು ಏನೆಲ್ಲ ಪಾರ್ಟಿ ಆಯೋಜಿಸುತ್ತಿದ್ದರು ಎಂಬುದನ್ನು ತಿಳಿದಿರೋದು ಎಂದರು.

ನನ್ನದೊಂದು ಫಾರ್ಮ್ ಹೌಸ್ ಇದೆ. ಆದರೆ ಅದನ್ನು ನಾನು ಬಾಡಿಗೆಗೆ ಕೊಟ್ಟಿದ್ದೇನೆ. ಈ ಹಿಂದೆ ಲಾಕ್‍ಡೌನ್ ಸಂದರ್ಭದಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅದು ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿಯೂ ನಾನು ಸ್ಪಷ್ಟನೆ ಕೊಟ್ಟಿದ್ದೆ. ನನಗೂ, ಇದಕ್ಕೂ ಸಂಬಂಧವಿಲ್ಲ. ಆ ಜಾಗ ನನ್ನದು ಹೌದು ಎಂದು ತಿಳಿಸಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

ಕರ್ನಾಟಕದಲ್ಲಿ ಒಂದು ಹೆಜ್ಜೆ ಭೂಮಿ ಸಂಪಾದನೆ ಮಾಡಬೇಕು ಅಂದರೆ ಆತ ಪುಣ್ಯ ಮಾಡಿರಬೇಕು. ಆ ಪುಣ್ಯ ಹಾಗೂ ಸೌಭಾಗ್ಯವನ್ನು ಕನ್ನಡದ ಜನತೆ ನನಗೆ ಕೊಟ್ಟಿದ್ದಾರೆ. ಅದಕ್ಕೆ ಸಂತಸ ವ್ಯಕ್ತಪಡಿಸುತ್ತೇನೆ. ಆದರೆ ಅದು ಈ ರೀತಿ ಕೆಟ್ಟ ವಿಚಾರಕ್ಕೆ ಉಪಯೋಗ ಪಡೆದುಕೊಂಡಿದೆಯಾ ಎಂಬುದು ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿಯೇ ನನಗೆ ತುಂಬಾ ಬೇಜಾರಾಗಿತ್ತು. ಲಾಕ್‍ಡೌನ್ ಸಮಯ ಆಗಿದ್ದರಿಂದ ಅಲ್ಲಿಗೆ ಭೇಟಿ ನೀಡಲು ಆಗಿಲ್ಲ. ಹೀಗಾಗಿ ನನಗೂ, ಇದಕ್ಕೂ ಸಂಬಂಧ ಇಲ್ಲ ಎಂದು ಫೋನ್ ಮಾಡಿ ಬೇಕಿದ್ದರೆ ಅಗ್ರಿಮೆಂಟ್ ನೋಡಿ ಅಂತ ಹೇಳಿದ್ದೆ. ನನ್ನ ಜಾಗದಲ್ಲಿ ಪಾರ್ಟಿ ನಡೆದಿರುವುದಕ್ಕೆ ಸಿಸಿಬಿ ನೋಟಿಸ್ ಕಳುಹಿಸಿರಬಹುದು ಬಿಟ್ಟರೆ ನನಗೆ ಬೇರೆ ಯಾವ ಲಿಂಕ್ ಕೂಡ ಇಲ್ಲ. ನನಗೆ ಪಾರ್ಟಿಗೆ ಹೋಗುವ ಅಭ್ಯಾಸವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡ್ರಗ್ಸ್ ತಗೋತಿರಾ ಅಂತ ಇದೂವರೆಗೂ ನನ್ನ ಯಾರೂ ಕೇಳಿಲ್ಲ, ಕೇಳೋದು ಇಲ್ಲ. ಯಾಕೆಂದರೆ ಈ ಮುಸುಡಿಗೆ ಸಿನಿಮಾನೇ ಇಲ್ಲ ಅಂತ ಹೇಳಿ ಹೋಗುತ್ತಾರೆ. ನಾನು ಕರ್ನಾಟಕ್ಕೆ ಬರೀ ಹೊಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದವನು. ಇಂದು ಈ ಮಟ್ಟಕ್ಕೆ ಹೆಸರು ಮಾಡಿದ್ದೀನಿ ಅಂದರೆ ಅದಕ್ಕೆ ಕರ್ನಾಟಕ ಜನತೆಯ ಪ್ರೀತಿಯೇ ಕಾರಣ. ಕಷ್ಟಪಟ್ಟು ಬಂದವನು ಇಂತಹ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

ಐಷಾರಾಮಿ ಜೀವನ ಟಕ್ ಅಂತ ಬಂದ್ಬಿಡ್ತು ಅಂತ ಇಟ್ಟುಕೊಳ್ಳಿ. ಅವನು ಬದಲಾಗಬಹುದೇನೋ. ಆದರೆ ದುಡ್ಡಿನ ಬೆಲೆ ಗೊತ್ತಿದ್ದವನು ಯಾವತ್ತೂ ಇಂತಹ ಕೆಲಸಕ್ಕೆ ಕೈ ಹಾಕಲ್ಲ. ನಮಗೆ ಕುಟುಂಬ ಇದೆ. ಬಿಗ್ ಬಾಸ್ ನಲ್ಲಿ 99 ದಿನ ಇದ್ದೆ. ಒಂದಿನಾನು ನಾನು ಸ್ಮೋಕಿಂಗ್ ರೂಮಿಗೆ ಹೋಗಿಲ್ಲ. ನಾವು ಆಯ್ತು ನಮ್ಮ ಕೆಲಸ ಹಾಗೂ ಜನರ ನಗಿಸೋದೇ ಆಯ್ತು ಅಂತ ಇದ್ದೇನೆ. ಮನೆಗೆ ಬಂದ ಬಳಿಕವೂ ಕುಟುಂಬದ ಜೊತೆ ಸಮಯ ಕಳೆದಿದ್ದೂ ಆಯ್ತು ಅಷ್ಟೇ ನನ್ನ ಜೀವನ ಎಂದರು.

ಅತ್ತೆ-ಮಾವ ಪ್ರತ್ಯೇಕವಾಗಿದ್ದರಿಂದ ಅವರ ಸಹಾಯಕ್ಕಾಗಿ ಕಳೆದ 3-4 ತಿಂಗಳ ಹಿಂದೆ ಹೈದರಾಬಾದ್ ಗೆ ಬಂದಿದ್ದೇನೆ. ನಾನು, ನನ್ನ ಕುಟುಂಬ ಅಂತ ನಾನು ಇರೋನು. ವೇದಿಕೆಯ ಮೇಲೆ ಹೋಗಿ ಸಾವಿರಾರು ಜನರ ಮುಂದೆ ಶೋ ಮಾಡಿ ಅವರಿಂದ ಸೈ ಅನಿಸಿಕೊಳ್ಳುತ್ತೇವೆ ಅಲ್ವ ಅದಕ್ಕಿಂತ ಬೆಸ್ಟ್ ಡ್ರಗ್ ಯಾವುದೂ ಇಲ್ಲ ಎಂದು ಹೇಳಿದರು.

ನಮ್ಮನ್ನು ನೋಡಿ ನಮ್ಮ ಮಕ್ಕಳು ಕಲಿಯುತ್ತಾರೆ. ನನಗೂ 10 ವರ್ಷದ ಒಬ್ಬ ಮಗನಿದ್ದಾನೆ. ನಾನೇದರೂ ಈ ರೀತಿ ಕೆಟ್ಟ ಕೆಲಸದಲ್ಲಿ ಕೈ ಜೋಡಿಸಿದರೆ ನಾಳೆ ಅವನು ಕೂಡ ಫಾಲೋ ಮಾಡುತ್ತಾನೆ. ಅಷ್ಟೊಂದು ಬೇಜವಾಬ್ದಾರಿ ತಂದೆ ನಾನಲ್ಲ. ನಾಳೆ ನಾನು ವಿಚಾರಣೆಗೆ ಹಾಜರಾಗುತ್ತೇನೆ. ನನ್ನ ಜೊತೆ ಇರುವ ದಾಖಲೆಗಳನ್ನು ಕೊಡುತ್ತೇನೆ. ನಾನು ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದೇನೆ ಎಂದು ನುಡಿದರು.

ಇದು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಚಿತ್ರರಂಗದಲ್ಲಿ ಎಲ್ಲರೂ ಬರ್ತಾರೆ ಅವರ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಅದರಲ್ಲಿ ಒಬ್ಬರೋ, ಇಬ್ಬರೋ ಕಾಂಟ್ಯಾಕ್ಟ್ ನಲ್ಲಿ ತಗ್ಲಾಕ್ಕೊಳ್ತಾರೆ. ಆದರೆ ಇದರ ಹಿಂದೆ ದೊಡ್ಡ ಮಟ್ಟದ ಮಾಫಿಯಾವೇ ಇದೆ ಎಂದು ಅಕುಲ್ ಪ್ರತಿಕ್ರಿಯಿಸಿದರು.

Click to comment

Leave a Reply

Your email address will not be published. Required fields are marked *