Thursday, 12th December 2019

ಜಾನುವಾರು ಕಳ್ಳರೆಂದು ಶಂಕಿಸಿ ಮೂವರನ್ನು ಹೊಡೆದು ಕೊಂದ ಗ್ರಾಮಸ್ಥರು

ಪಾಟ್ನಾ: ಜಾನುವಾರ ಕಳ್ಳರೆಂದು ಅನುಮಾನ ವ್ಯಕ್ತಪಡಿಸಿ ಗ್ರಾಮಸ್ಥರು ಮೂವರನ್ನು ಹೊಡೆದು ಕೊಲೆ ಮಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

ಪಾಟ್ನಾದ ಚಪ್ರಾ ಜಿಲ್ಲೆಯ ಬನಿಯಾಪುರಕ್ಕೆ ಮೂವರು ಪಿಕ್ ಅಪ್ ಟ್ರಕ್‍ನಲ್ಲಿ ಇಂದು ಮುಂಜಾನೆ 4.30 ಗಂಟೆಗೆ ಬಂದಿದ್ದರು. ಆದರೆ ಅವರನ್ನು ಕಳ್ಳರೆಂದು ತಿಳಿದ ಗ್ರಾಮಸ್ಥರು ದೊಣ್ಣೆ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ಮೂವರು ಜಾನುವಾರು ಕಳ್ಳತನಕ್ಕೆ ಬಂದಿರಲಿಲ್ಲ. ಅವರು ಜಾನುವಾರು ಖರೀದಿಗೆ ಬಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಒಂದು ವಾರದ ಹಿಂದೆ ಗ್ರಾಮದಲ್ಲಿ ಕಳ್ಳರು ಜಾನುವಾರು ಕಳ್ಳತ ಮಾಡಿದ್ದರು. ಈ ಹಿನ್ನೆಲೆ ಪಿಕ್ ಅಪ್ ಟ್ರಕ್‍ನಲ್ಲಿ ಬಂದಿದ್ದರುವವರು ಕಳ್ಳರೆಂದು ಶಂಕೆ ವ್ಯಕ್ತಪಡಿಸಿ ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಆಕ್ರಂದನ ಮುಗಿಲು ಮುಟ್ಟಿದ್ದು ನ್ಯಾಯ ಕೊಡಿಸುವಂತೆ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ಮಾಡಿದ್ದ ಪ್ರಮುಖರನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ತ್ರಿಪುರದ ಧಲೈ ಜಿಲ್ಲೆಯಲ್ಲಿ ಜುಲೈ 2ರಂದು ಇಂತಹದ್ದೇ ಘಟನೆ ನಡೆದಿತ್ತು. ಈ ವೇಳೆ ಬುದ್ಧಿ ಕುಮಾರ್ (36) ಎಂಬವರನ್ನು ಜಾನುವಾರ ಕಳ್ಳನೆಂದು ತಿಳಿದು ಗ್ರಾಮಸ್ಥರು ಹೊಡೆದು ಕೊಲೆ ಮಾಡಿದ್ದರು.

Leave a Reply

Your email address will not be published. Required fields are marked *