Connect with us

Crime

ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ನಾಲ್ವರು ದುರ್ಮರಣ

Published

on

ಧಾರವಾಡ: ಕಾರು ಮತ್ತು ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ಯರಿಕೊಪ್ಪ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಕೊಪ್ಪಳ ಮೂಲದ ರುದ್ರಪ್ಪ ಮರಕುರಿ (65), ಈರಮ್ಮ ಮರಕುರಿ (55), ಮಂಜುನಾಥ್ ಮರಕುರಿ (35) ಹಾಗೂ ಶಿವರಾಜ್ ಅಳವಂಡಿ (2) ಮೃತ ದುರ್ದೈವಿಗಳು. ಕಾರಿನಲ್ಲಿ ಆರು ಮಂದಿ ಕೊಪ್ಪಳದಿಂದ ಬೆಳಗಾವಿ ಕಡೆ ಹೊರಟಿದ್ದರು. ಟೆಂಪೋ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು. ಆದರೆ ಯರಿಕೊಪ್ಪ ಬೈಪಾಸ್ ರಸ್ತೆಯಲ್ಲಿ ಕಾರು ಮತ್ತು ಟೆಂಪೋ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ.

ಡಿಕ್ಕಿಯ ರಭಸಕ್ಕೆ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಮತಾ ಮತ್ತು ಸಾನ್ವಿ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಪ್ಪ ಮರಕುರಿ ಮತ್ತು ಈರಮ್ಮ ಮರಕುರಿ ಇಬ್ಬರನ್ನು ಚಿಕಿತ್ಸೆಗೆಂದು ಕೊಪ್ಪಳದಿಂದ ಬೆಳಗಾವಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪಘಾತ ನಡೆಯುವ 5 ನಿಮಿಷದ ಮೊದಲು ಕಾರಿನಲ್ಲಿದ್ದವರೆಲ್ಲರೂ ಬೈಪಾಸ್ ರಸ್ತೆಯಲ್ಲಿರುವ ರಮ್ಯಾ ರೆಸಿಡೆನ್ಸಿಯಲ್ಲಿ ಟಿಫಿನ್ ಮಾಡಿದ್ದರು. ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ಈ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.