Crime
ಗರ್ಭಿಣಿ ಪತ್ನಿ, ಮಗಳನ್ನು ಕೊಂದು 8 ಗಂಟೆ ಶವಗಳ ಜೊತೆ ಕುಳಿತ ಕ್ಯಾನ್ಸರ್ ರೋಗಿ!

ಲಕ್ನೋ: ವ್ಯಕ್ತಿಯೊಬ್ಬ ತನ್ನ 8 ತಿಂಗಳ ಗರ್ಭಿಣಿ ಪತ್ನಿ ಹಾಗೂ ಮಗಳನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ಗಾಯತ್ರಿಪುರಂ ಮೊಹಲ್ಲಾದಲ್ಲಿ ನಡೆದಿದೆ.
ಆರೋಪಿಯನ್ನು ಗಲ್ಫಮ್ ಎಂದು ಗುರುತಿಸಲಾಗಿದ್ದು, ಈತ ಪತ್ನಿ ಹಾಗೂ 5 ವರ್ಷದ ಮಗಳನ್ನು ಭಾನುವಾರ ಹತ್ಯೆ ಮಾಡಿದ್ದಾನೆ. ಮರುದಿನ ಅಂದರೆ ಸೋಮವಾರ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಲ್ಲದೆ ಪತ್ನಿ ಹಾಗೂ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಮಧ್ಯೆ ಮಹಿಳೆಯ ತಂದೆ, ಅಳಿಯ, ಆತನ ಸಹೋದರ ಹಾಗೂ ತಂದೆ ಸೇರಿಕೊಂಡು ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತ ಠಾಣೆಗೆ ಬಂದು ಶರಣಾದ ಗಲ್ಫಮ್ ನನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕೂಡಲೇ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಭಾನುವಾರ ರಾತ್ರಿ ಊಟದ ಸಮಯದಲ್ಲಿ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯ ಬಳಿಕ ಪತ್ನಿ ಹಾಗೂ ಮಗಳನ್ನು ಹತ್ಯೆಗೈದಿದ್ದಾನೆ. ನಂತರ ಸುಮಾರು 8 ಗಂಟೆಗಳ ಕಾಲ ಶವಗಳ ಜೊತೆ ಕುಳಿತಿದ್ದಾನೆ.
ಆರೋಪಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಆ ಇಬ್ಬರು ಪತ್ನಿಯರಿಂದ ಈತ ದೂರ ಇದ್ದನು. ಗಲ್ಫಮ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ. ಇದೇ ಕಾರಣದಿಂದ ಮೊದಲ ಪತ್ನಿ ಈತನನ್ನು ಬಿಟ್ಟಿದ್ದಳು. ಆ ಬಳಿಕ ಈತ ಇನ್ನೊಂದು ಮದುವೆಯಾಗಿದ್ದು, ಓರ್ವ ಮಗಳು ಕೂಡ ಇದ್ದಳು. ಆದರೆ ಕ್ರಮೇಣ ಪತ್ನಿ, ಮಗಳನ್ನು ಈತನ ಬಳಿ ಬಿಟ್ಟು ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಕೊರೊನಾ ಲಾಕ್ಡೌನ್ ಸಮಯದಲ್ಲಿ ಗಲ್ಫಂ ಮೂರನೇ ಮದುವೆಯಾಗಿದ್ದು, ಇದೀಗ ಆಕೆ ಗರ್ಭಿಣಿಯಾಗಿದ್ದಾಗಲೇ ಕೊಲೆ ಮಾಡಿದ್ದಾನೆ.
