Connect with us

ಸಿಡಿ ಬಗ್ಗೆ ಗೊತ್ತಿಲ್ಲ, ರಾಜಕಾರಣದ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ: ಜಾರಕಿಹೊಳಿ

ಸಿಡಿ ಬಗ್ಗೆ ಗೊತ್ತಿಲ್ಲ, ರಾಜಕಾರಣದ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ: ಜಾರಕಿಹೊಳಿ

ಬೆಳಗಾವಿ: ಸಿಡಿ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸಚಿವರಿಗೆ ಶುಭಾಶಯ ಕೋರಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸಿಎಂ ತೆಗೆದುಕೊಂಡ ನಿರ್ಣಯಕ್ಕೆ ಬೆನ್ನಲುಬಾಗಿ ನಿಲ್ಲುತ್ತೇವೆ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ ಅದನ್ನ ಪಕ್ಷದವರು ಸರಿ ಪಡಿಸುತ್ತಾರೆ ಎಂದರು. ಇದೇ ವೇಳೆ ಸಿಡಿ ಬಾಂಬ್ ಕುರಿತು ಮಾತನಾಡಿದ ಅವರು, ಸಿಡಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಈ ರೀತಿಯ ಸಿಡಿಗಳು ಬರ್ತವೆ ಹೋಗುತ್ತವೆ. ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ಈ ರೀತಿ ಮಾತನಾಡಬಾರದು. ಏನು ಸಿಡಿ ಇವೆ ಗೊತ್ತಿಲ್ಲ, ರಾಜಕಾರಣದ ಅವರ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರುತ್ತವೆ. ಅದರ ಬಗ್ಗೆ ಮಾತಾಡಬಾರದು ಎಂದರು.

ಕಷ್ಟದಲ್ಲಿರುವ ರಾಜಕಾರಣಿಗಳಿಗೆ ನೈತಿಕ ಸ್ಥೈರ್ಯ ನೀಡಬೇಕು. ಅವರನ್ನು ಡ್ಯಾಮೇಜ್ ಮಾಡಬಾರದು, ಬರೀ ರಾಜಕಾರಣ ಮಾಡಬೇಕು. ಯಡಿಯೂರಪ್ಪನವರು ಬ್ಲ್ಯಾಕ್ ಗೆ ಹೆದರುವ ರಾಜಕಾರಣಿ ಅಲ್ಲ. ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದ ಮನುಷ್ಯ. ಯಾವ ಸಿಡಿ ಇಲ್ಲ, ಎನೂ ಇಲ್ಲ ಎಂದು ತಿಳಿಸಿದರು.

ಅಸಮಾಧಾನಿತ ಕೆಲ ಶಾಸಕರು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸೋತವರಿಗೆ ಕೊಡ್ತಾರೆ, ಬಿಡ್ತಾರೆ ಗೊತ್ತಿಲ್ಲ. ಯೋಗೇಶ್ವರ್ ಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು, ಕಷ್ಟಪಟ್ಟು ಆರೋಗ್ಯ ಹಾಳು ಮಾಡಿಕೊಂಡು, ಸಾಲ ಮಾಡಿಕೊಂಡು ಮಾಡುವುದು ಯಾಕೆ ಬೇಕಿತ್ತು? ಬಿಜೆಪಿ ಸರ್ಕಾರ ರಚಿಸಲು ತಮ್ಮ ಮನೆಯ ಮೇಲೆ 9 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಕಡೆಯಿಂದ ಸಿ.ಪಿ.ಯೋಗೇಶ್ವರ್ ಅಂದು ಸಾಲ ತಂದಿದ್ದರು. ಈಗ ಮಾತನಾಡುವವರು ಆಗ ಎಲ್ಲಿದ್ದರು ಎಂದು ರಮೇಶ್ ಅಸಮಾಧಾನಿತ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸರಿಯಾಗಿದೆ. ಈ ಸರ್ಕಾರದ ರಚನೆಯಲ್ಲಿ ಯೋಗೇಶ್ವರ್ ಪಾತ್ರ ಬಹಳ ದೊಡ್ಡದಿದೆ ಎಂದು ಯೋಗೇಶ್ವರ್ ಪರ ರಮೇಶ್ ಬ್ಯಾಟಿಂಗ್ ಮಾಡಿದರು. ಅಲ್ಲದೆ ಭ್ರಷ್ಟರಿಗೆ ರಮೇಶ್ ಸಾಥ್ ಕೊಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಮಾತಾಡಿರುವುದು ನಮಗೆ ಆಶೀರ್ವಾದ, ಅದರ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಆದರೆ ನಿಮ್ಮ ನಿಲುವೇನು ಎಂಬುದರ ಕುರಿತು ಉತ್ತರಿಸಿದ ಅವರು, ನಾವು ಯಡಿಯೂರಪ್ಪ ಪರವಾಗಿ ಇರುತ್ತೇವೆ. ಹಾದಿ ಬೀದಿಯಲ್ಲಿ ಮಾತನಾಡಲು ಆಗಲ್ಲ, ಎಲ್ಲಿ ಮಾತಾಡಬೇಕು ಅಲ್ಲಿ ಮಾತನಾಡುತ್ತೇವೆ. ಯೋಗೇಶ್ವರ್ ಮುಖ್ಯವಾಗಿದ್ದವರು ಎಂದಿದ್ದಾರೆ.

ಶಾಸಕ ಮುನಿರತ್ನ ನೂರಕ್ಕೆ ನೂರರಷ್ಟು ಪ್ರಮಾಣ ವಚನ ಸ್ವೀಕರಿಸುತ್ತಾರೆ ಅಂದುಕೊಂಡದ್ದೆ. ಮುನಿರತ್ನ ಈಗ ನರ್ವಸ್ ಆಗಬಾರದು ಮುಂದಿನ ದಿನಗಳಲ್ಲಿ ಹೈಕಮಾಂಡ್ ಜತೆಗೆ ಮಾತನಾಡಿ ಮಂತ್ರಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವರ ಪರವಾಗಿ ಪ್ರಯತ್ನ ಮಾಡುತ್ತೇವೆ. ಮುನಿರತ್ನ ಜೊತೆ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಬಾಂಬ್ ಟೀಮ್ ನ ಕ್ಯಾಪ್ಟನ್ ಅಲ್ಲ, ಕೊನೆಯ ಹದಿನೇಳನೆಯವನು. ಮುನಿರತ್ನ ಮತ್ತು ನಾಗೇಶ್ ಡ್ರಾಪ್ ಆಗ್ತಾರೆ ಎಂದು ನನಗೆ ಕಲ್ಪನೆ ಇರಲಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಿ.ಪಿ.ಯೋಗೇಶ್ವರ್ ಹದಿನೈದು ದಿನ ಕುಟುಂಬ ಬಿಟ್ಟು ನಮ್ಮ ಜತೆಗಿದ್ದರು. 2023ರ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗೆದ್ದು ಆಗ ಅವರ ಹಕ್ಕು ಚಲಾಯಿಸಿ ಸರಿಯಾಗಿ ಸಚಿವರಾಗುವುದು ಒಳ್ಳೆಯದು. ಈಗಿನ ಸಂದರ್ಭಗಳನ್ನ ನೋಡಿ ತಿಳಿದುಕೊಳ್ಳಬೇಕು ಎಂದು ಅಸಮಾಧಾನ ಶಾಸಕರಿಗೆ ಟಾಂಗ್ ನೀಡಿದ್ದಾರೆ.

ಜಿ.ಪಂ, ತಾ.ಪಂ ಚುನಾವಣೆ ಆದ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಹೈಕಮಾಂಡ್ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ. ಬೆಳಗಾವಿ, ಬೆಂಗಳೂರಿಗೆ ಸರ್ಕಾರ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರದ ಕುರಿತು ಮಾತನಾಡಿ, ರೇಣುಕಾಚಾರ್ಯ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇಟ್ಟುಕೊಂಡು ಕೂರುವ ಬದಲು ಬಿಡುಗಡೆ ಮಾಡಿದರೆ ಒಳ್ಳೆಯದು. ಸಿಎಂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆಯುತ್ತಾರೆ ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ.

Advertisement
Advertisement